ADVERTISEMENT

ಬೌದ್ಧ ಮಹಾ ಸಮ್ಮೇಳನ 26ರಂದು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 21:45 IST
Last Updated 23 ಫೆಬ್ರುವರಿ 2023, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯಿಂದ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನವನ್ನು ಫೆ.26ರಂದು ನಗರದ ಲಲಿತಮಹಲ್‌ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.

‘ಪುರಭವನ ಸಮೀ‍ಪ ಅಂಬೇಡ್ಕರ್‌ ಪ್ರತಿಮೆಗೆ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಭೀಮರಾವ್‌ ಯಶವಂತರಾವ್‌ ಅಂಬೇಡ್ಕರ್‌ ಮಾಲಾರ್ಪಣೆ ಮಾಡುವರು. ಲಲಿತ ಮಹಲ್‌ ಅರಮನೆ ಮೈದಾನ ದವರೆಗೆ ಬಿಕ್ಕು ಸಂಘದ ನೇತೃತ್ವದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಸಮತಾ ಸೈನಿಕ ದಳದ 350 ಜನರಿಂದ ವಿಶೇಷ ಪಥಸಂಚಲನ ‘ಧಮ್ಮ ನಡಿಗೆ’ ನಡೆಯಲಿದೆ’ ಎಂದು ಚಾಮರಾಜನಗರದ ನಳಂದಾ ವಿಶ್ವವಿದ್ಯಾಲಯದ ಬೋಧಿದತ್ತ ಭಂತೇಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಗವಾನ್‌ ಬುದ್ಧನ ಪ್ರಜ್ಞೆ, ಕರುಣೆ, ಮೈತ್ರಿ, ಶೀಲ, ಸಮಾಧಿ ಮತ್ತು ಸಹೋದರತೆಗೆ ಸಾಕ್ಷಿಯಾಗಲಿರುವ ಈ ಸಮ್ಮೇಳನದಲ್ಲಿ ಬೆಳಿಗ್ಗೆ 11.30ಕ್ಕೆ ‘ಬುದ್ಧ ವಂದನಾ– ತಿಸರಣ– ಪಂಚಶೀಲ’ ಹಾಗೂ ‘ಮೈತ್ರಿ ಧ್ಯಾನ’ ಧಮ್ಮ ಪ್ರವಚನವು ಆರಂಭಗೊಳ್ಳಲಿದೆ. ಮಧ್ಯಾಹ್ನ 3.30ಕ್ಕೆ ಬೌದ್ಧ ಸಾಹಿತ್ಯ ಗೋಷ್ಠಿ, ಸಂಜೆ 6ಕ್ಕೆ ‘ದೇವನಾಂಪ್ರಿಯ ಅಶೋಕ’ ನಾಟಕ ಪ್ರದರ್ಶನ ಇರಲಿದೆ’
ಎಂದರು.

ADVERTISEMENT

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಭಾರತದ ಇತಿಹಾಸದಲ್ಲಿ ಕ್ರೂರತೆಯೇ ಇಲ್ಲದ ಯುಗವೇನಾದರೂ ಇದ್ದರೆ ಅದು ಬುದ್ಧನ ಯುಗವಾಗಿತ್ತು. ಇಂದು ಸಮಾಜದಲ್ಲಿ ಕ್ರೌರ್ಯ ಹೆಚ್ಚುತ್ತಿದ್ದು, ಬುದ್ಧನ ತತ್ವವನ್ನು ಭರವಸೆಯಾಗಿ ನೋಡಬೇಕಿದೆ.
ಈ ಸಮ್ಮೇಳನವೂ ನಮ್ಮಲ್ಲಿ ಜಾಗೃತಿ ಹಾಗೂ ಮೈತ್ರಿ ಮೂಡಿಸಲಿದೆ. ರಾಜ್ಯದ ವಿವಿಧೆಡೆಗಳಿಂದ ಬೌದ್ಧ ಬಿಕ್ಕುಗಳು ಆಗಮಿಸುವ ಈ ಸಮ್ಮೇಳನ ಹೊಸ ಸಾಧ್ಯತೆಗೆ ದಾರಿಯಾಗಲಿದೆ’ ಎಂದು
ಹೇಳಿದರು.

ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ್‌, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಗನ್ನಾಥ್‌, ಸದಸ್ಯ ಗೋಪಾಲ್‌ ಇದ್ದರು.

ಬೌದ್ಧ ಧರ್ಮದತ್ತ 30 ಕೋಟಿ ಜನ’

ದಲಿತ ಮುಖಂಡ ಪುರುಷೋತ್ತಮ್‌ ಮಾತನಾಡಿ, ‘ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮವನ್ನು 30 ವರ್ಷಗಳ ಕಾಲ ಅಧ್ಯಯನ ಮಾಡಿ ನಂತರ ಸ್ವೀಕರಿಸಿದರು. ಬುದ್ಧನಲ್ಲಿ ನಂಬಿಕೆಯನ್ನು ಹೊಂದಿದ್ದರು. ಇಂದು ದೇಶದ 30 ಕೋಟಿ ಜನರು ಬೌದ್ಧ ಧರ್ಮದತ್ತ ಮುಖ ಮಾಡಿದ್ದು, ನಮ್ಮದು ಬೌದ್ಧ ರಾಷ್ಟ್ರವಾದಾಗಲೇ ಶಾಂತಿ, ಮೈತ್ರಿ ಹಾಗೂ ಪ್ರಗತಿ ಸಾಧ್ಯ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.