ಇನ್ನುಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳಲ್ಲಿನಶಾಸಕರನ್ನು ಹಿಡಿದಿಡಲು ಹೊಸಹೊಸ ಖಾತೆಗಳನ್ನು ಸೃಷ್ಟಿಸುವ ಐಡಿಯಾಗಳು ಹರಿದಾಡುತ್ತಿವೆ.ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮೈತ್ರಿ ನಾಯಕರನ್ನು, ಉರುಳಿಸಲು ಶತಪ್ರಯತ್ನ ಮಾಡುತ್ತಿರುವ ಮತ್ತೊಂದು ಪಕ್ಷದವರನ್ನು ನೆಟ್ಟಿಗರು ಹಾಸ್ಯದಲ್ಲೇ ಹಣಿಯುತ್ತಿದ್ದಾರೆ.
ನೆಟ್ಟಿಗರಐಡಿಯಾಗಳಭಾಗವಾಗಿ ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಇಂದು ಸಮ್ಮಿಶ್ರ ಸರ್ಕಾರದಲ್ಲೊಂದು ನೂತನ ಖಾತೆಯನ್ನು ಗುರುತಿಸಿದ್ದಾರೆ. ಅದರ ಹೆಸರು ‘ಲೋಕೋಪಯೋಗಿ ಜ್ಯೋತಿಷಿ’. ಆ ಖಾತೆ ಈ ಮೊದಲಿನಿಂದಲೂ ಇತ್ತೇ? ಈಗಷ್ಟೇ ಸುರೇಶ್ ಕುಮಾರ್ ಸೃಷ್ಟಿಸಿದ್ದೇ?ಎಂಬ ಚರ್ಚೆಗಳು ಇಲ್ಲಿ ನಗಣ್ಯ. ಹಾಸ್ಯಕ್ಕೆ ಆಹಾರ ಅಷ್ಟೇ.
ತಮ್ಮದೇ ಆದ ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಮ್ಮಿಶ್ರ ಸರ್ಕಾರದಲ್ಲಿ ವಿಶ್ವಾಸ ಸಂಕಟ ಉಂಟಾದಾಗಿನಿಂದ ವಿವಿಧ ದೇಗುಲಗಳನ್ನು ಸುತ್ತಿದ್ದಾರೆ. ಸದನದಲ್ಲಿಯೂ ಬರಿಗಾಲಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ರೇವಣ್ಣ ಅವರ ಹೆಸರು ಉಲ್ಲೇಖಿಸದೆ, ‘ಸಮ್ಮಿಶ್ರ ಸರ್ಕಾರದ ಲೋಕೋಪಯೋಗಿ ಜ್ಯೋತಿಷಿ ‘ಇಂದು ಮಂಗಳವಾರ’ ಎಂದು ಆಗಲೇ ರಾಗ ಎಳೆಯತೊಡಗಿದ್ದಾರಂತೆ’ ಎಂದು ಬರೆದುಕೊಳ್ಳುವ ಮೂಲಕ ಸುರೇಶ್ ಕುಮಾರ್ ಟ್ವಿಟರ್‌ನಲ್ಲಿ ಕಾಲೆಳೆದಿದ್ದಾರೆ.
ಸ್ಪೀಕರ್ ಕೆಟ್ಟಿದೆ
ಕೆಟ್ಟುಹೋಗಿದ್ದ ಸ್ಪೀಕರ್‌ವೊಂದರ ಚಿತ್ರವನ್ನುದ್ದೇಶಿಸಿ, ಸದ್ಯದ ರಾಜಕೀಯ ಸ್ಥಿತಿಗತಿಯನ್ನು ಬಿಂಬಿಸಿ ‘ಈ ಸ್ಪೀಕರ್ ಕೆಟ್ಟುಹೋಗಿದೆ’ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಸಾಕಷ್ಟು ಪರವಿರೋಧದ ಚರ್ಚೆಗಳೂ ನಡೆದವು.
ಕರ್ನಾಟಕದಲ್ಲಿರುವ ಸ್ಪೀಕರ್‌ಗಿಂತ ಈ ಸ್ಪೀಕರ್ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.
ಕುಮಾರಣ್ಣ ಕುಸ್ತಿ ವೀಕ್ಷಣೆ
ವಿಶ್ವಾಸ ಮತ ಸಾಬೀತು ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ಕಚ್ಚಾಟವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವೀಕ್ಷಿಸುತ್ತಿದ್ದಾರೆ.
ವಿಶ್ವಕಪ್ ಪ್ರಶಸ್ತಿ ಮೊತ್ತ ಮತ್ತು ಶಾಸಕರ ಖರೀದಿ
ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಇಂಗ್ಲೆಂಡ್ ತಂದಕ್ಕೆ ಸಿಕ್ಕಿದ್ದು, 69 ಕೋಟಿ ರೂಪಾಯಿ.ಕರ್ನಾಟಕದಲ್ಲಿ ಈ ಹಣಕ್ಕೆ ಇಬ್ಬರು ಶಾಸಕರೂ ಸಿಗಲ್ಲ’ ಎಂಬ ಮತ್ತೊಂದು ಹಾಸ್ಯಾಸ್ಪದ ಪೋಸ್ಟ್ ವಿಶ್ವಕಪ್ ಸಂದರ್ಭದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸದ್ದುಮಾಡಿತ್ತು. ಇದು ಈಗಲೂ ಚಾಲ್ತಿಯಲ್ಲಿದೆ.
ಸೂಪರ್ ಓವರ್ ಆಡಲು ಯಡಿಯೂರಪ್ಪ ಪ್ರಾಕ್ಟೀಸ್
ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ರೆಸಾರ್ಟ್‌ನಲ್ಲಿದ್ದ ವೇಳೆ ಕ್ರಿಕೆಟ್ ಆಡುತ್ತಿದ್ದ ಚಿತ್ರವೊಂದನ್ನು ಪ್ರಕಟಿಸಿದ್ದ ನೆಟ್ಟಿಗರು, ಇದು ಸೂಪರ್ ಓವರ್‌ಗೆ ಸಿದ್ಧತೆ ಎಂದು ಬರೆದುಕೊಂಡಿದ್ದಾರೆ.
ನಾನು ಲೈಕ್‌ಗಳಿಗಾಗಿ ಪೋಸ್ಟ್ ಹಾಕ್ತಿಲ್ಲ
ಸಿಎಂ ಕುಮಾರಸ್ವಾಮಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕರು ತೀವ್ರವಾಗಿ ಒತ್ತಾಯ ಮಾಡುತ್ತಿದ್ದ ವೇಳೆ ಕುಮಾರಸ್ವಾಮಿ ಅವರು ‘ನಾನು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ’ ಎಂದಿದ್ದರು. ಅವರ ಮಾತಿನ ಯಥಾವತ್ ಎನ್ನುವಂತೆ ಶರತ್ ಶೆಟ್ಟಿ ಗಿರ್ವಾಡಿ ಎನ್ನುವವರು, ನಾನು ಲೈಕ್‌ಗೋಸ್ಕರ್ ಪೋಸ್ಟ್ ಹಾಕುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಒಬ್ಬರನ್ನೊಬ್ಬರು ನಂಬದವರು ನಮ್ಮನ್ನು ನಂಬಿ ಎಂದು ಜನರಿಗೆ ಹೇಳುತ್ತಿದ್ದಾರೆ
ಕಾಂಗ್ರೆಸ್‌ನವರಿಗೆ ಜೆಡಿಎಸ್ ಮೇಲೆ ನಂಬಿಕೆ ಇಲ್ಲ.
ಜೆಡಿಎಸ್‌ನವರಿಗೆ ಕಾಂಗ್ರೆಸ್ ಮೇಲೆ ನಂಬಿಕೆ ಇಲ್ಲ.
ಬಿಜೆಪಿಯವರಿಗೆ ಸ್ಪೀಕರ್ ಮೇಲೆ ನಂಬಿಕೆ ಇಲ್ಲ.
ಈ ರಾಜಕಾರಣಿಗಳೆಲ್ಲ ‘ನಮ್ಮನ್ನು ನಂಬಿ ನಮ್ಮನ್ನು ಚುನಾಯಿಸಿ ಎಂದು ಜನರಿಗೆ ಹೇಳುತ್ತಿದ್ದಾರೆ’
ಸದನ ಸಂಕಟ ಮುಗಿಯೋದು ಯಾವಾಗ
ಈ ದಿನವಾದರೂ ‘ಸದನ ಸದಾರಮೆ’ ದಾರಾವಾಹಿ ಕೊನೆಯ ಕಂತು ಮುಗಿಯಬಹುದೆ? ‘ಸದನದಲ್ಲಿ ಮಾತು ಕೊಟ್ಟವರೇ ಮಾತು ತಪ್ಪಿದರೆ ಅವರ ಕೊಟ್ಟ ವಿಪ್‌ನ್ನು ಶಾಸಕರು ಉಲ್ಲಘಿಸಿದರೆ ತಪ್ಪೇನು’
ಉದ್ಯಾನವನದಲ್ಲಿ ಹಿರಿಯರ ಚಾವಡಿಯಿಂದ ಕೇಳಿಬಂದ ಮಾತು ಎಂದು ಶಿವನಪ್ಪ ಕೃಷ್ಣಪ್ಪ ಎನ್ನುವವರು ಬರೆದುಕೊಂಡಿದ್ದಾರೆ.
ಚಂದ್ರಯಾನ–2 ಯೋಜನೆಯಜಿಎಸ್‌ಎಲ್‌ವಿ ಮಾರ್ಕ್–3 ನೌಕೆಯು ನಭಕ್ಕೆ ಜಿಗಿಯುತ್ತಿದ್ದ ಸಂದರ್ಭದ ವಿಡಿಯೊವನ್ನು ಪ್ರಧಾನಿ ಮೋದಿ ಅವರು ತಮ್ಮ ಕಚೇರಿಯಲ್ಲಿ ವೀಕ್ಷಿಸಿದ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಅದರ ಹೋಲಿಕೆ ಎಂಬಂತೆ, ಎಚ್.ಡಿ.ದೇವೇಗೌಡ ಅವರು ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ‘ವಿಶ್ವಾಸಮತ’ ಸಾಬೀತು ಸಂಕಟಕ್ಕೆ ಸಿಲುಕಿರುವ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಾತನಾಡುತ್ತಿರುವ ವಿಡಿಯೊವನ್ನು ವೀಕ್ಷಿಸುತ್ತಿದ್ದಾರೆ ಎಂಬಂತೆ ಸೃಷ್ಟಿಸಿದ ಇನ್ನೊಂದು ಚಿತ್ರವೂ ವೈರಲ್ ಆಗಿದೆ.
ನಾವು ಕರ್ನಾಟಕ ವಿಧಾನಸಭೆ ವಿಶ್ವಾಸಮತ ಸಾಬೀತು ಯಾವಾಗ ಎಂದು ಕಾಯುತ್ತಿದ್ದೇವೆ.
ಕರ್ನಾಟಕ ಶಾಸಕರು ವಿಶ್ವಾಸ ಮತ ಸಾಬೀತಿಗೂ ಮುನ್ನ ಮತ್ತು ನಂತರ
ಸಚಿವ ಖಾತೆಗಳಿಗೆ ತರಹೇವಾರಿ ಐಡಿಯಾಗಳು
‘ಹೀಂಗ್ ಮಾಡ್ರೆ ಹೆಂಗೆ..?
ಮೂರೂ ಪಕ್ಷದವರು ಸೇರಿಯೇ ಸರ್ಕಾರ ರಚಿಸಿಬಿಟ್ರೆ, ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ಕೊಟ್ಟುಬಿಟ್ರೆ, ಚಿಂತೆ ಬೇಡ, ಅದಕ್ಕಾಗಿ ಹೊಸದಾಗಿ ಬೇಕಾದಷ್ಟು ಖಾತೆ ಸೃಷ್ಟಿಸಿದರಾಯಿತು. ಇರುವ ಖಾತೆಗಳನ್ನೇ ಹೀಂಗ್ ಹಂಚಿಬಿಡಿ.
ಕೃಷಿ ಖಾತೆಯನ್ನು ಭತ್ತ ಸಚಿವ, ರಾಗಿ ಸಚಿವ, ಜೋಳ ಸಚಿವ, ಬೇಳೆ ಸಚಿವ, ಕುಂಬಳಕಾಯಿ ಸಚಿವ, ನಿಂಬೆ ಸಚಿವ.... ಹೀಂಗ್ ಮಾಡಿಬಿಡಿ.
ಕೈಗಾರಿಕೆಯನ್ನು ದೊಡ್ಡ ಕೈಗಾರಿಕೆ, ಸಣ್ಣ ಕೈಗಾರಿಕೆ, ಅತಿ ಸಣ್ಣ ಕೈಗಾರಿಕೆ, ಕಂಡಾಪಟ್ಟೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಚರ್ಚ್ ಕೈಗಾರಿಕೆ, ಮಸೀದಿ ಕೈಗಾರಿಕೆ ಎಂದು ಹರಿದು ಹಂಚಿದರೆ ಆಯ್ತು.
ಪಶು ಸಂಗೋಪನೆಯನ್ನು ದನ ಸಚಿವ, ಎಮ್ಮೆ ಸಚಿವ, ಕುದುರೆ ಸಚಿವ, ಕೋಳಿ ಸಚಿವ, ಹಂದಿ ಸಚಿವ, ನಾಯಿ ಸಚಿವ ಎನ್ನೋಣ.ನೀರಾವರಿಯನ್ನು ದೊಡ್ಡ ನೀರಾವರಿ, ಸಣ್ಣ ನೀರಾವರಿ, ಕೊಳಚೆ ನೀರಾವರಿ ಸಚಿವ ಎಂದು ವಿಭಾಗಿಸೋಣ.
ಶಿಕ್ಷಣವನ್ನು ಏಳನೇ ಕ್ಲಾಸ್ ಸಚಿವ, ಆರನೇ ಕ್ಲಾಸ್ ಸಚಿವ, ಮೂರನೇ ಕ್ಲಾಸ್ ಸಚಿವ (ಥರ್ಡ್ ಕ್ಲಾಸ್ ಅಲ್ಲ) ಎಂದು ವಿದ್ಯಾರ್ಹತೆಗೆ ಅನುಗುಣವಾಗಿ ನಿಯೋಜಿಸಬಹುದು.
ಆರೋಗ್ಯ ಖಾತೆಯನ್ನು ಕ್ಯಾನ್ಸರ್ ಸಚಿವ, ಮಧುಮೇಹ ಸಚಿವ, ಹುಚ್ಚರ ಸಚಿವ, ಗ್ಯಾಸ್ಟ್ರಿಕ್ ಸಚಿವ ಎನ್ನಲಡ್ಡಿಯಿಲ್ಲ.
ಇಷ್ಟೆಲ್ಲಾ ಆದಮೇಲೆ ಕ್ರೀಡೆಯೂ ಇದೆಯಲ್ಲ ಅದನ್ನು, ಕಬಡ್ಡಿ ಸಚಿವ, ಕ್ರಿಕೆಟ್ ಸಚಿವ, ಲಾಂಗ್ ಜಂಪ್ ಸಚಿವ, ಗೋಲಿ ಅಂಡ್ ಚಿನ್ನಿ ದಾಂಡ್ ಸಚಿವ ಎನ್ನಬಹುದಲ್ಲವೇ?
ಹೀಗೆ ಮಾಡಿದಾಗ ಭಿನ್ನಮತವೂ ಇರಲ್ಲ, ವಿರೋಧ ಪಕ್ಷವೂ ಇಲ್ಲವಾಗಿ ವಿಧಾನಸೌಧದಲ್ಲಿ ಶಾಂತಿಯೂ ನೆಲೆಸಿ ವಾನರ ಸೇನಾ ಸಮೇತ ರಾಮ ರಾಜ್ಯ ಸ್ಥಾಪನೆಯಾಗುತ್ತೆ.
ಏನಂತೀರಿ?
ಕರ್ನಾಟಕದಿಂದಲೇ ಶುರು ಮಾಡ್ರೆ ಹೆಂಗೇ😜😜’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.