ಬೆಂಗಳೂರು: ‘ಕೈಗಾರಿಕಾ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ನಿರಂತರವಾಗಿ ಅಳೆಯಬಲ್ಲ ಸ್ವಯಂಚಾಲಿತ ನಿಗಾ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಹೈಕೋರ್ಟ್, ರಾಜ್ಯ ಪರಿಸರ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಆದೇಶಿಸಿದೆ.
‘ಬಾಳೆ ಕಾಯಿ ಚಿಪ್ಸ್ ತಯಾರಿಕೆ ಮತ್ತು ಕಾಫಿ ಬೀಜ ಪುಡಿ ಮಾಡುವ ಘಟಕದಿಂದ ಮಾಲಿನ್ಯ ಉಂಟಾಗುತ್ತಿದೆ’ ಎಂದು ಆಕ್ಷೇಪಿಸಿ ಶೃಂಗೇರಿ ನಿವಾಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ದೇಶದ ನಿವಾಸಿಗಳು ಮಾಲಿನ್ಯಯುಕ್ತ ಪರಿಸರದಲ್ಲಿ ರೋಗದಿಂದ ಬಳಲಬಾರದು. ಎಲ್ಲರಿಗೂ ಮಾಲಿನ್ಯ ಮುಕ್ತ ವಾತಾವರಣ ಲಭ್ಯವಾಗಲು ಕೆಎಸ್‌ಪಿಸಿಬಿ ವಾಯು ಮತ್ತು ಜಲ ಕಾಯ್ದೆ ನಿರ್ವಹಿಸುವ ಸೂಕ್ತ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ. ಆದ್ದರಿಂದ, ರಾಜ್ಯದಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆಯ ಕುರಿತಾದ ವಿಸ್ತೃತ ಯೋಜನಾ ವರದಿಯನ್ನು ಮುಂದಿನ ಆರು ವಾರಗಳಲ್ಲಿ ಸಲ್ಲಿಸಿ’ ಎಂದು ಕೆಎಸ್‌ಪಿಸಿಬಿಗೆ ನಿರ್ದೇಶಿಸಿದೆ.
‘ಅರ್ಜಿದಾರರು ಆಕ್ಷೇಪಿಸಿರುವ ಘಟಕವು ತನ್ನ ಕಾರ್ಯ ನಿರ್ವಹಿಸಲು ಸೂಕ್ತ ಪರವಾನಗಿ, ನಿರಾಕ್ಷೇಪಣಾ ಪ್ರಮಾಣ ಪತ್ರ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಅಗತ್ಯವಿದೆ’ ಎಂದು ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.