ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ (2022–23)‘ವಿಶೇಷ ಅಭಿವೃದ್ಧಿ ಯೋಜನೆ’ಯಡಿ (ಎಸ್‌ಡಿಪಿ) ಮೀಸಲಿಟ್ಟ ₹ 3,000 ಕೋಟಿ ಅನುದಾನವನ್ನು ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಗುರುತಿಸಿದ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಮಾತ್ರ ವೆಚ್ಚ ಮಾಡಬೇಕೇ ಅಥವಾಕೇಂದ್ರ ಸರ್ಕಾರದ ನೀತಿ ಆಯೋಗ ಸೂಚಿಸಿರುವ 49 ಸೂಚ್ಯಂಕಗಳಿಗೆ ಅನುಗುಣವಾಗಿ ‘ಮಹತ್ವಾಕಾಂಕ್ಷಿ ತಾಲ್ಲೂಕು’ಗಳ ಅಭಿವೃದ್ಧಿಗೆ ವೆಚ್ಚ ಮಾಡಬೇಕೇ ಎಂಬ ಗೊಂದಲ ಮುಂದುವರಿದಿದೆ.
ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ಕ್ರಿಯಾಯೋಜನೆ ರೂಪಿಸುವುದು ವಿಳಂಬವಾಗಿದ್ದು, ಎಸ್‌ಡಿಪಿ ಅನುದಾನದಲ್ಲಿ ₹ 669.20 ಕೋಟಿ ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ ₹ 440.72 ಕೋಟಿ(ಅಕ್ಟೋಬರ್‌ವರೆಗೆ) ವೆಚ್ಚವಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ನಂಜುಂಡಪ್ಪ ವರದಿಯ ಯೋಜನೆ ಬದಲು ನೀತಿ ಆಯೋಗ ಸೂಚಿಸಿರುವ ಸೂಚ್ಯಂಕಗಳಿಗೆ ಅನುಗುಣವಾಗಿ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಮಂಡಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಇನ್ನೂ ಒಪ್ಪಿಗೆ ನೀಡಿಲ್ಲ. ಬಜೆಟ್ ಘೋಷಣೆಯಂತೆ ಸಿದ್ಧಪಡಿಸಿದ್ದ ಈ ಪ್ರಸ್ತಾವವನ್ನು ಏಪ್ರಿಲ್ 17, ಮೇ 5 ಮತ್ತು ಆಗಸ್ಟ್ 12ರ ಸಚಿವ ಸಂಪುಟ ಸಭೆಗೆ ಮಂಡಿಸಿದ್ದರೂ ನಿರ್ಣಯ ಕೈಗೊಳ್ಳದೆ ಮುಂದೂಡಿಕೆಯಾಗಿದೆ.
ಈ ಮಧ್ಯೆ, ಅಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅಪೌಷ್ಟಿಕತೆ ನಿವಾರಣೆಯ ‘ಮಹತ್ವಾಕಾಂಕ್ಷಿ ತಾಲ್ಲೂಕು’ಗಳನ್ನು ಗುರುತಿಸಿ ಯೋಜನೆ ರೂಪಿಸಿ ಈ ಅನುದಾನ ಬಳಕೆಯ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಆದರೆ, ಮಹತ್ವಾಕಾಂಕ್ಷಿ ತಾಲ್ಲೂಕುಗಳ ಹೆಸರಿನಲ್ಲಿ ನಂಜುಂಡಪ್ಪ ವರದಿಯಲ್ಲಿರುವ ಹಿಂದುಳಿದ ತಾಲ್ಲೂಕುಗಳ ಹೊರಗಿನ ತಾಲ್ಲೂಕುಗಳಿಗೆ ಎಸ್‌ಡಿಪಿ ಅನುದಾನ ವೆಚ್ಚ ಮಾಡುವುದಕ್ಕೆ ವಿಧಾನಮಂಡಲದ ಅಂದಾಜು ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಅಂದಾಜು ಸಮಿತಿ ತೀರ್ಮಾನಕ್ಕೆ ವ್ಯತಿರಿಕ್ತ
‘ನೀತಿ ಆಯೋಗ ಸೂಚಿಸಿರುವ ಸೂಚ್ಯಂಕಗಳ ಆಧಾರದಲ್ಲಿ ಗುರುತಿಸಿರುವ ಅಭಿವೃದ್ಧಿ ಆಕಾಂಕ್ಷಿ (ಮಹತ್ವಾಕಾಂಕ್ಷಿ) ತಾಲ್ಲೂಕುಗಳಿಗೆ ಮಾತ್ರ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ವಿನಿಯೋಗಿಸಬೇಕು ಎಂದು ಇದೇ 13ರಂದು ಆರ್ಥಿಕ ಇಲಾಖೆ ಸೂಚಿಸಿದೆ. ಅಲ್ಲದೆ, ಮಹತ್ವಾಕಾಂಕ್ಷಿ ತಾಲ್ಲೂಕುಗಳ ಪಟ್ಟಿಯಲ್ಲಿ ಇಲ್ಲದ ನಂಜುಂಡಪ್ಪ ವರದಿಯಲ್ಲಿ ಇರುವ ತಾಲ್ಲೂಕುಗಳಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಬಳಿಕ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದೂ ಇಲಾಖೆ ತಿಳಿಸಿದೆ. ಆರೋಗ್ಯದಲ್ಲಿ 55, ಶಿಕ್ಷಣದಲ್ಲಿ 40 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ 44 ಮಹತ್ವಾಕಾಂಕ್ಷಿ ತಾಲ್ಲೂಕುಗಳಾಗಿದ್ದು, ಇವು ನಂಜುಂಡಪ್ಪ ವರದಿಯಲ್ಲಿರುವ ತಾಲ್ಲೂಕುಗಳ ಪಟ್ಟಿಯಲ್ಲಿ ಇಲ್ಲ.
ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಜೂನ್ 8ರಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಅಪೌಷ್ಟಿಕತೆ ನಿವಾರಣೆಯ ಮಹತ್ವಾಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಿ ಯೋಜನೆ ರೂಪಿಸಿ ಅನುದಾನ ಬಳಕೆಯ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿತ್ತು. ಅದರಂತೆ ಶಿಕ್ಷಣದಲ್ಲಿ ಹಿಂದುಳಿದ 93 (ನಂಜುಂಡಪ್ಪ ವರದಿಯ ಹೊರಗಿನ 40), ಆರೋಗ್ಯ
ದಲ್ಲಿ ಹಿಂದುಳಿದ 100 (ನಂಜುಂಡಪ್ಪ ವರದಿಯ ಹೊರಗಿನ 15), ಅಪೌಷ್ಟಿಕತೆ ನಿವಾರಣೆಗೆ 102 (ನಂಜುಂಡಪ್ಪ ವರದಿಯ ಹೊರಗಿನ 13) ಮಹತ್ವಾಕಾಂಕ್ಷಿ ತಾಲ್ಲೂಕುಗಳನ್ನು ಗುರುತಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ತಾಲ್ಲೂಕು ಅಭಿವೃದ್ಧಿಗೆ ಆರೋಗ್ಯ ಇಲಾಖೆಯಲ್ಲಿ ₹ 124.08 ಕೋಟಿಯ ಮತ್ತು ಮಹಿಳಾ
ಮತ್ತು ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ₹ 75 ಕೋಟಿಯ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು.
ಆದರೆ, ನ.3ರಂದು ನಡೆದ ವಿಧಾನಮಂಡಲದ ಅಂದಾಜು ಸಮಿತಿ ಸಭೆಯಲ್ಲಿ ನಂಜುಂಡಪ್ಪ ವರದಿಯಲ್ಲಿರುವ ತಾಲ್ಲೂಕುಗಳ ಪರಿಮಿತಿಯಲ್ಲಿಯೇ ಮಹತ್ವಾಕಾಂಕ್ಷಿ ತಾಲ್ಲೂಕುಗಳನ್ನು ಆಯ್ಕೆ
ಮಾಡಬೇಕು. ಯಾವುದೇ ಕಾರಣಕ್ಕೂ ಹೊರಗಿನ ತಾಲ್ಲೂಕುಗಳಿಗೆ ಈ ಹಣವೆಚ್ಚ ಮಾಡಬಾರದು ಎಂದು ಸೂಚಿಸಲಾಗಿದೆ ಎಂದು ಸಮಿತಿಯ ಸದಸ್ಯರೊಬ್ಬರುತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ಎಸ್‌ಡಿಪಿಯಡಿ ಹಣ ಬಿಡುಗಡೆಗೆ ನಿರ್ಧರಿಸಲಾಗಿದೆ. ಆದರೆ, ಎಸ್‌ಡಿಪಿಯೊ, ಮಹತ್ವಾಕಾಂಕ್ಷಿ ತಾಲ್ಲೂಕೊ ಎನ್ನುವುದನ್ನು ಮುಂದೆ ತೀರ್ಮಾನಿಸಲಾಗುವುದು</p>
-ಐ.ಎಸ್.ಎನ್.ಪ್ರಸಾದ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ
****
ಹಿಂದುಳಿದ ತಾಲ್ಲೂಕುಗಳಿಗೆ ಎಸ್‌ಡಿಪಿ ಅನುದಾನ ಬಳಸಲಾಗುವುದು. ಮಹತ್ವಾಕಾಂಕ್ಷಿ ತಾಲ್ಲೂಕುಗಳಿಗೆ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ.
-ಮುನಿರತ್ನ, ಯೋಜನೆ ಮತ್ತು ಸಾಂಖ್ಯಿಕ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.