ADVERTISEMENT

ಕಾವೇರಿ ನೀರು: ರಾಜ್ಯಕ್ಕೆ ನಿರಾಳ, ಹೊಸ ಆದೇಶ ನೀಡದ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:20 IST
Last Updated 24 ಜುಲೈ 2024, 14:20 IST
   

ನವದೆಹಲಿ: ತಮಿಳುನಾಡಿಗೆ ಕರ್ನಾಟಕವು ಹರಿಸುತ್ತಿರುವ ಕಾವೇರಿ ನೀರಿನ ಪ್ರಮಾಣ ತೃಪ್ತಿಕರ ಎಂದು ಅಭಿಪ್ರಾಯಪಟ್ಟಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಹೊಸ ಆದೇಶ ನೀಡಲು ನಿರಾಕರಿಸಿದೆ. 

‍ಪ್ರಾಧಿಕಾರದ 32ನೇ ಸಭೆ ನವದೆಹಲಿಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಗಳು ವಾದ ಮಂಡಿಸಿ, ‘ಜೂನ್‌ನಿಂದ ಜುಲೈ 22ರ ವರೆಗೆ ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಸಂಚಿತ ಒಳಹರಿವು 118 ಟಿಎಂಸಿ ಇದೆ. ಆದರೆ, ಇದೇ ಅವಧಿಯಲ್ಲಿ 30 ವರ್ಷಗಳ ಸರಾಸರಿ (1989-90 ರಿಂದ 2018-19) ಒಳಹರಿವು 98.679 ಟಿಎಂಸಿ’ ಎಂದರು. 

‘ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಜುಲೈ 11ರಂದು ಶಿಫಾರಸು ಮಾಡಿತ್ತು. ನಾಲ್ಕು ಜಲಾಶಯಗಳ ಕೇವಲ ಶೇ 15.72 ವಿಸ್ತೀರ್ಣ ಪರಿಗಣಿಸಿ ಸಮಿತಿ ಈ ಸೂಚನೆ ನೀಡಿತ್ತು. ಜೂನ್‌ನಿಂದ ಜುಲೈ 12ರ ವರೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಆದರೆ, ತಮಿಳುನಾಡಿನ ನದಿಮುಖಜ ಭೂಮಿಯಲ್ಲಿ ಉತ್ತಮ ಮಳೆಯಾಗಿತ್ತು. ತಮಿಳುನಾಡಿನ ಮೂರು ಜಲಾಶಯಗಳ ಜಲವರ್ಷದ ಅಂತ್ಯಕ್ಕೆ ಕ್ಯಾರಿಓವರ್‌ ಸಂಗ್ರಹ ಮತ್ತು ಜಲಾನಯನ ಪ್ರದೇಶದ ಜಲ ವಿಜ್ಞಾನ ಪರಿಸ್ಥಿತಿ ಪರಿಣಿಸಿ ಪ್ರಾಧಿಕಾರ ಹಾಗೂ ಸಮಿತಿ ಆದೇಶ ನೀಡಬೇಕು’ ಎಂದು ಆಗ್ರಹಿಸಿದರು. 

ADVERTISEMENT

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಆದೇಶದ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ನೀರು ಬಿಡದ ಕಾರಣ ಕುರುವೈ ಬೆಳೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಅಲ್ಲಿನ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದು ತಮಿಳುನಾಡಿನ ಅಧಿಕಾರಿಗಳು ಪ್ರಾಧಿಕಾರದ ಗಮನಕ್ಕೆ ತಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.