ADVERTISEMENT

ಪರಿಷ್ಕೃತ ಪಠ್ಯ: ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಪರಿಹಾರ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2022, 15:54 IST
Last Updated 27 ಜೂನ್ 2022, 15:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪರಿಷ್ಕೃತ ಪಠ್ಯಕ್ಕೆ ಸಂಬಂಧಿಸಿದಂತೆ ಕೊನೆಗೂ ವಿರೋಧ ಪಕ್ಷಗಳ ಒತ್ತಡಕ್ಕೆ ಸರ್ಕಾರ ಮಣಿದಿದ್ದು, ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯಗಳನ್ನು ಮರು ಪರಿಷ್ಕರಿಸಲು ನಿರ್ಧರಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಸರ್ಕಾರದ ಮುಂದಿರುವ ಮಾರ್ಗ ಎಂದು ಹೇಳಿದ್ದಾರೆ.

'ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗಿನ ಪರಿಹಾರ' ಎಂದು ಟ್ವೀಟಿಸಿದ್ದಾರೆ.

'ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? ' ಎಂದು ಹೇಳಿದರು.

'ರಾಜ್ಯ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕೃರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ?' ಎಂದು ಪ್ರಶ್ನಿಸಿದರು.

'ಪರಿಷ್ಕೃತ ಪಠ್ಯದಲ್ಲಿರುವುದು ಬೆರಳೆಣಿಕೆಯ ತಪ್ಪುಗಳಲ್ಲ, ಅದರ ಪುಟ-ಪುಟಗಳಲ್ಲಿಯೂ ತಪ್ಪುಗಳಿರುವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ' ಎಂದು ವಾಗ್ದಾಳಿ ನಡೆಸಿದರು.

'ಪರಿಷ್ಕೃತ ಪಠ್ಯಪುಸ್ತಕದ ಬಗೆಗಿನ ವಿವಾದವನ್ನು ಸರ್ಕಾರ ಪ್ರತಿಷ್ಠೆಯಾಗಿ ಸ್ವೀಕರಿಸದೆ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ವಿವಾದವನ್ನು ಬೆಳೆಸದೆ ಹೊಸ ಪಠ್ಯವನ್ನು ವಾಪಸು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.