ಕಲಬುರಗಿ: ‘ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಫಲಾನುಭವಿ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಬೃಹತ್ ಸಮಾವೇಶ ನವೆಂಬರ್ ಅಂತ್ಯದಲ್ಲಿ ಯಾದಗಿರಿಯಲ್ಲಿ ನಡೆಯಲಿದೆ’ ಎಂದುತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಹೇಳಿದರು.
‘ಸಮಾವೇಶದಲ್ಲಿ ಕಲಬುರಗಿಯ 216 ಮತ್ತು ಯಾದಗಿರಿಯ 140 ತಾಂಡಾಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಕ್ಕುಪತ್ರ ವಿತರಿಸುವರು. ಹಂತಹಂತವಾಗಿ ವಿವಿಧೆಡೆ ಸಮಾವೇಶಗಳ ಮೂಲಕ ರಾಜ್ಯದ 3,300 ಪೈಕಿ 1,700 ತಾಂಡಾಗಳ ನಿವಾಸಿಗಳಿಗೆ ಹಕ್ಕುಪತ್ರ ತಲುಪಿಸಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಲಬುರಗಿ ಜಿಲ್ಲೆ ಮಾದರಿಯಾಗಿ ಇರಿಸಿಕೊಂಡು, ಜಿಲ್ಲಾಧಿಕಾರಿಗೆ ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು. ಹಕ್ಕುಪತ್ರಗಳ ವಿತರಣಾ ಸಮಾವೇಶ ವಿಜಯಪುರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗದಲ್ಲಿ ನಡೆಸಲಾಗುವುದು’ ಎಂದರು.
‘ಫಲಾನುಭವಿಗಳು ಪಾವತಿಸಬೇಕಾದ ತಾಂಡಾ ಜಮೀನಿನ ಮೌಲ್ಯವನ್ನು ರಾಜ್ಯ ಸರ್ಕಾರ ಅಥವಾ ತಾಂಡಾ ಅಭಿವೃದ್ಧಿ ನಿಗಮ ಭರಿಸುವುದು. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ಖಾಸಗಿ ಜಮೀನಿನಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ ನಂತರ, ಆ ಜಮೀನು ಮಾಲೀಕರು ತಕರಾರು ಅರ್ಜಿ ಸಲ್ಲಿಸಿದರೆ ಜಿಲ್ಲಾಧಿಕಾರಿ ಮೂಲಕ ಪರಿಹಾರ ಧನ ಪಾವತಿ ಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.