ADVERTISEMENT

ಈ ವರ್ಷ ಟಿಪ್ಪು ಪಠ್ಯಕ್ಕೆ ಕೊಕ್‌ ಇಲ್ಲ: ಸಚಿವ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 14:25 IST
Last Updated 20 ಜನವರಿ 2020, 14:25 IST
   

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲೂ (2020–21) ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಕುರಿತ ಅಧ್ಯಾಯ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

‘ಟಿಪ್ಪು ಕುರಿತಂತೆ ವಿಸ್ತೃತ ಚರ್ಚೆ ಆಗಬೇಕು, ಅದಕ್ಕಾಗಿ ಇನ್ನೊಂದು ಸಮಿತಿ ರಚಿಸಬೇಕು ಎಂದು ಡಿಎಸ್‌ಇಆರ್‌ಟಿ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನೊಂದು ಸಮಿತಿ ರಚಿಸಿ, ವಿವರವಾದ ಚರ್ಚೆ ನಡೆಸುವುದಕ್ಕೆ ಸಮಯ ಬೇಕಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯ ಲಭ್ಯವಾಗಬೇಕು ಎಂಬ ಕಾರಣಕ್ಕೆ ಈಗಾಗಲೇ ಪಠ್ಯಗಳ ಮುದ್ರಣಕ್ಕೆ ಆದೇಶ ನೀಡಲಾಗಿದೆ. ಹೀಗಾಗಿ ಮುಂದಿನ ವರ್ಷವೂ ಟಿಪ್ಪು ಪಠ್ಯಕ್ಕೆ ಕೊಕ್‌ ಇಲ್ಲ’ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಹಿರಿಯ ಶಾಸಕ ಅ‍ಪ್ಪಚ್ಚು ರಂಜನ್‌ ಅವರು ಸಾಕಷ್ಟು ದಾಖಲೆಗಳನ್ನು ನೀಡಿ ಟಿಪ್ಪು ಪಠ್ಯ ಕೈಬಿಡಲು ಮನವಿ ಸಲ್ಲಿಸಿದ್ದರು. ಅದರಂತೆ ಸಮಿತಿ ರಚಿಸಿ ವರದಿ ಪಡೆಯಲಾಗಿದೆ. ಟಿಪ್ಪುವಿನಿಂದ ಕೊಡಗು ಮಾತ್ರವಲ್ಲ, ಮೇಲುಕೋಟೆ, ಚಿತ್ರದುರ್ಗ,‌ದಕ್ಷಿಣ ಕನ್ನಡ ಮೊದಲಾದ ಕಡೆ ಸಾಕಷ್ಟು ಅನ್ಯಾಯಗಳಾಗಿವೆ, ಇದಕ್ಕೆ ದಾಖಲೆಗಳೂ ಇವೆ,ಅದೆಲ್ಲವನ್ನೂ ವಿವರವಾಗಿ ಚರ್ಚಿಸಬೇಕಾಗುತ್ತದೆ. ಟಿಪ್ಪುವಿನ ಇನ್ನೊಂದು ಮುಖವನ್ನೂ ನೀಡಬೇಕಾಗುತ್ತದೆ. ಆದರೆ ಟಿಪ್ಪುವಿನ ಇನ್ನೊಂದು ಮುಖವನ್ನು ಪರಿಚಯಿಸಬೇಕೇ ಎಂಬುದನ್ನು ಹೊಸ ಸಮಿತಿ ನಿರ್ಧರಿಸುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ‌ ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಲಾಗಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.