ADVERTISEMENT

15, 16ರಂದು ‘ದಕ್ಷಿಣ ಭಾರತ ಉತ್ಸವ’: ಎಚ್‌.ಕೆ. ಪಾಟೀಲ

ಪಿಪಿಪಿ ಮಾದರಿಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ – ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 14:14 IST
Last Updated 12 ಜೂನ್ 2024, 14:14 IST
ಎಚ್‌.ಕೆ. ಪಾಟೀಲ 
ಎಚ್‌.ಕೆ. ಪಾಟೀಲ    

ಬೆಂಗಳೂರು: ‘ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ವಾಣಿಜ್ಯೋದ್ಯಮ ಮಹಾಮಂಡಲದ (ಎಫ್‌ಕೆಸಿಸಿಐ) ಸಹಯೋಗದಲ್ಲಿ ಇದೇ 15 ಮತ್ತು 16ರಂದು ‘ದಕ್ಷಿಣ ಭಾರತ ಉತ್ಸವ–2024’ ಆಯೋಜಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಉತ್ಸವಕ್ಕೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ, ಲಕ್ಷದ್ವೀಪ ಪ್ರವಾಸಿ ಸಹಭಾಗೀದಾರರನ್ನು ಆಹ್ವಾನಿಸಲಾಗುವುದು’ ಎಂದರು.

‘ಒಂದೇ ವೇದಿಕೆಯಲ್ಲಿ ಪ್ರವಾಸೋದ್ಯಮ ಹೂಡಿಕೆದಾರರ ಸಭೆಗಳು, ಬಿ2ಬಿ ಸಭೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ, ಈ ಉತ್ಸವದ ಮೂಲಕ ಪ್ರವಾಸೋದ್ಯಮ ಹೂಡಿಕೆಯ ಸಂಭಾವ್ಯತೆಯನ್ನು ಪ್ರದರ್ಶಿಸಲು ಮತ್ತು ಖಾಸಗಿ ವಲಯದಿಂದ ಹೆಚ್ಚಿನ ಸಂಖ್ಯೆಯನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

‘ಹೂಡಿಕೆದಾರರು ಹೂಡಿಕೆ ಮಾಡಬಹುದಾದ ಯೋಜನೆಗಳ ವರದಿಯನ್ನು ಸಿದ್ಧಪಡಿಸಲಾಗಿದೆ. ಸ್ಮಾರಕಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸ್ಮಾರಕ ದತ್ತು ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ 272 ಸ್ಮಾರಕಗಳ ದತ್ತು ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ ಮತ್ತು ಮೈಸೂರು, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಹಳೆಬೀಡು ಪ್ರವಾಸಿ ವೃತ್ತಗಳಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಹೊಂದಿರುವ 388.4 ಎಕರೆ ಜಮೀನಿನಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ₹595.84 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು 16 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒಟ್ಟು 18 ಜಲಾಶಯಗಳ ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ದಕ್ಷಿಣ ಭಾರತ ಉತ್ಸವದ ಮೂಲಕ ದಕ್ಷಿಣದ ರಾಜ್ಯಗಳ ಸಾಂಸ್ಕೃತಿಕ ಐತಿಹಾಸಿಕ ಭೌಗೋಳಿಕ ವೈವಿಧ್ಯವನ್ನು ಪ್ರದರ್ಶಿಸಿ ಪ್ರವಾಸೋದ್ಯಮಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ.

-ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ

‘ಕ್ರೂಸ್ ಹಿನ್ನೀರು ಟೂರಿಸಂ’

‘ಮಂಗಳೂರು ಮಲ್ಪೆ ಬೇಲೆಕೇರಿ ಮತ್ತು ಕಾರವಾರ ಬಂದರುಗಳಲ್ಲಿ ಕ್ರೂಸ್‌ ಟೂರಿಸಂ ಉಡುಪಿ ಕಬಿನಿ ಜಲಾಶಯ ಭದ್ರಾ ಜಲಾಶಯ ಕಾರವಾರಗಳಲ್ಲಿ ಹಿನ್ನೀರು ಟೂರಿಸಂ ಹಾಸನ– ಮಂಗಳೂರು ಮಾರ್ಗದಲ್ಲಿ ಐಷಾರಾಮಿ ಪ್ರವಾಸಿ ರೈಲು ಹೀಗೆ ರಾಜ್ಯದ ವಿವಿಧೆಡೆ ಪಿಪಿಪಿ ಮಾದರಿಯ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟಿನಲ್ಲಿ ರಾಜ್ಯದ ಪ್ರವಾಸೋದ್ಯಮವನ್ನು ದೇಶೀಯ ಮತ್ತು ವಿದೇಶಿಯ ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿದೆ’ ಎಂದು ಎಚ್‌.ಕೆ. ಪಾಟೀಲ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.