ಬೆಂಗಳೂರು: ‘ಜನಸೇವೆ’ಗಾಗಿಯೇ ಸ್ಥಾಪಿತವಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ, ಈಶಾನ್ಯ) ಈಗ ಟ್ರಿಪಲ್ ‘ಸಿ’ಗಳದ್ದೇ (corruption, cruel, criminal) ದರ್ಬಾರು. ಬಿಡಿಭಾಗಗಳ ಖರೀದಿಯಿಂದ ಗುಜರಿ ಸೇರುವತನಕ ಕಾಂಚಾಣದ್ದೇ ಸದ್ದು. ದುರಾಡಳಿತ, ಭ್ರಷ್ಟಾಚಾರ, ಬೇಜವಾಬ್ದಾರಿತನಗಳ ಫಲವಾಗಿ ಇಲಾಖೆಯ ನಷ್ಟದ ಮೊತ್ತ ಸಾರ್ವಕಾಲಿಕ ದಾಖಲೆ ತಲುಪಿದೆ.
ನಿಗಮಗಳಲ್ಲಿ ನಡೆಯುತ್ತಿರುವ ಅನಾಚಾರ ಬಹುರೂಪಿಯಾಗಿದ್ದು, ಹೆಗ್ಗಣಗಳಂತೆ ಬಿಲ ಕೊರೆದು ಇಡೀ ವ್ಯವಸ್ಥೆಯನ್ನೇ ನುಂಗುತ್ತಿರುವ ಅಕ್ರಮ ವ್ಯವಹಾರಗಳು ನಿಗಮಗಳನ್ನು ಕ್ಯಾನ್ಸರ್‌ನಂತೆ ವ್ಯಾಪಿಸಿವೆ. ನಾಲ್ಕೂ ನಿಗಮಗಳು ನೂರಲ್ಲ, ಇನ್ನೂರಲ್ಲ ಬರೋಬ್ಬರಿ ₹1,739 ಕೋಟಿ ನಷ್ಟದಲ್ಲಿವೆ.
‘ಸ್ಟೇರಿಂಗ್’ ಹಿಡಿಯಲು ಗೊತ್ತಿಲ್ಲದವರೂ ಧನಬಲ ದಿಂದ ಚಾಲಕರಾಗಿದ್ದಾರೆ, ವಿಭಾಗೀಯ ನಿಯಂತ್ರಕರಾಗಿದ್ದಾರೆ (ಡಿ.ಸಿ). ಕಂಡಕ್ಟರ್ ಹುದ್ದೆಯಿಂದ ಟಿ.ಸಿ ಹುದ್ದೆಗೆ ಬಡ್ತಿ ಪಡೆಯಲು ಕನಿಷ್ಠ ₹ 30 ಸಾವಿರ ಪೀಕುವುದು ಅನಿವಾರ್ಯ ಎಂಬುದು ಸಿಬ್ಬಂದಿ ಅಳಲು. ‘ವ್ಯವಹಾರ’ ಕುದುರಿಸಿಕೊಂಡ ನಂತರವೇ ಆಂತರಿಕ ತನಿಖೆ, ನಂತರ ವರದಿ, ಶಿಸ್ತುಕ್ರಮ ಎಂಬ ನಾಟಕಗಳು ನಡೆಯುತ್ತವೆ ಎನ್ನುವುದೂ ನಿಗಮಗಳಲ್ಲಿ ಜನಜನಿತ.
ನೇಮಕ, ಬಡ್ತಿ, ವರ್ಗಾವಣೆ, ಶಿಸ್ತುಕ್ರಮ ಹೀಗೆ ಎಲ್ಲ ಹಂತಗಳಲ್ಲಿ ನಡೆಯುವ ವಸೂಲಿ ‘ದಂಧೆ’ ಒಂದು ಥರವಾದರೆ, ಕೆಟಿಪಿಟಿ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ) ಕಾಯ್ದೆ ಸೇರಿದಂತೆ ಪಾರದರ್ಶಕತೆ ವ್ಯವಸ್ಥೆ ಇದ್ದರೂ ಬಸ್, ಬಿಡಿಭಾಗ ಖರೀದಿಯಲ್ಲಿ ಪಡೆಯುವ ‘ಕಿಕ್ ಬ್ಯಾಕ್‘ ಪರಿಯೇ ಭಿನ್ನ.
ಇನ್ನು ವಾಣಿಜ್ಯ ಮಳಿಗೆಗಳ ಗುತ್ತಿಗೆ, ನಿಲ್ದಾಣ, ಡಿಪೊ, ಕಚೇರಿಗಳ ನಿರ್ಮಾಣ ಕಾಮಗಾರಿಯಲ್ಲಿ ನಡೆ ಯುವ ‘ಒಳ ಒಪ್ಪಂದ’ದ್ದು ಮಗದೊಂದು ಆಯಾಮ. ಗುಜರಿ ವಸ್ತುಗಳ ಮಾರಾಟದ ಕೈಬದಲಾವಣೆ ಮತ್ತೂ ವಿಭಿನ್ನ. ಡಿ.ಸಿ. ತಮ್ಮಣ್ಣ ಸಾರಿಗೆ ಸಚಿವರಾದ ಬಳಿಕ, ‘ನನ್ನ ಗಮನಕ್ಕೆ ಬಾರದೆ ಇಲಾಖೆಯಲ್ಲಿ ವರ್ಗಾವಣೆ ನಡೆಯುವಂತಿಲ್ಲ’ ಎಂದು ಹೊರಡಿಸಿದ ಫರ್ಮಾನು, ಹಿರಿಯ ಅಧಿಕಾರಿಗಳ ಕೈ ಕಟ್ಟಿಹಾಕಿದೆ. ಸಚಿವರ ಹೆಸರು ಹೇಳಿಕೊಂಡು ‘ಏಜೆಂಟರು’ ವರ್ಗಾವಣೆಗಳ ಹಿಂದೆ ಕೈಯಾಡಿಸಿ ಮಾಫಿಯಾ ಥರ ಕೆಲಸ ಮಾಡಿದ ಆರೋಪಗಳಿವೆ.
ನಷ್ಟವನ್ನು ಬೆನ್ನಿಗೆ ಕಟ್ಟಿಕೊಂಡೇ ಸಾಗಿರುವ ವಾಯವ್ಯ ಸಾರಿಗೆ ಸಂಸ್ಥೆ ಹಗರಣಗಳಿಂದ ನಲುಗಿದೆ. ನಿಗಮದ ಪ್ರಾದೇಶಿಕ ಕಾರ್ಯಾಗಾರದಲ್ಲಿ 2015ರಲ್ಲಿ ಗುಜರಿ ಮಾರಾಟ ಮತ್ತು ಬಸ್‌ಗಳ ಚಾಸಿ ಬದಲಿಸಿದ ಹಗರಣ ದೊಡ್ಡ ಸದ್ದು ಮಾಡಿತ್ತು. ಟೈರ್ ಖರೀದಿಯಲ್ಲಿ ಹಗರಣ ನಡೆದು, ಸಂಸ್ಥೆ ಅದರಿಂದ ಹೊರಬಂದು ಸುಧಾರಣೆಯಾಗುತ್ತಿದೆ ಎನ್ನುವುದರೊಳಗೆ ಗುಜರಿ ಹಗರಣ ಬಯಲಾಗಿತ್ತು. ಗುಜರಿ ಮಾರಾಟದಲ್ಲಿ ₹ 2.80 ಕೋಟಿ ದುರ್ಬಳಕೆ ಆರೋಪ ಕೇಳಿಬಂದಿತ್ತು.
2016ರ ಫೆಬ್ರವರಿಯಲ್ಲಿ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕಿಯನ್ನೇ (ವಿನೋತ್ ಪ್ರಿಯಾ) ಸ್ಥಾನಪಲ್ಲಟಗೊಳಿಸುವ ಹುನ್ನಾರ ನಡೆದಿತ್ತು. ನಾಲ್ಕು ವರ್ಷಗಳ ತನಿಖೆ ಬಳಿಕ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸುವ ಮೂಲಕ ಹಗರಣಗಳಲ್ಲಿ ಭಾಗಿಯಾದರೆ ತಕ್ಕ ಶಾಸ್ತಿ ಖಚಿತ ಎಂಬ ಸಂದೇಶವನ್ನು ಇತ್ತೀಚೆಗೆ ರವಾನಿಸ ಲಾಗಿದೆ. ಹಳೇ ವಾಹನ ಖರೀದಿ ಟೆಂಡರ್ ಹಾಕಲು ಬಂದಿದ್ದ ಕೆಲವು ಬಿಡ್‌ದಾರರು ವಾಹನಗಳಲ್ಲಿ ಹಲವು ಬಿಡಿಭಾಗಗಳೇ ಕಾಣೆಯಾಗಿವೆ ಎಂದೂ ಆಕ್ಷೇಪಿಸಿರುವ ನಿದರ್ಶನಗಳೂ ಇವೆ.
ಇದನ್ನೂ ಓದಿ...ಸಾರಿಗೆ ಸಂಸ್ಥೆಗಳ ದರ ಪರಿಷ್ಕರಿಸದಿದ್ದರೆ ಉಳಿವು ಕಷ್ಟ!
ನಾಲ್ಕು ನಿಗಮಗಳ ಆರ್ಥಿಕ ಸ್ಥಿತಿ ಶೋಚನೀಯ. ನಷ್ಟದ ಕಾರಣಕ್ಕೆ ಬಿಎಂಟಿಸಿ ನೌಕರರ ವೇತನದಿಂದ ಕಡಿತಗೊಳಿಸಿರುವ ₹ 280 ಕೋಟಿ ಭವಿಷ್ಯ ನಿಧಿ ಮೊತ್ತವನ್ನು ಭವಿಷ್ಯ ನಿಧಿಗೆ ಪಾವತಿಸಿಲ್ಲ. ವಾಯವ್ಯ ಸಾರಿಗೆ ನಿಗಮ ಇಪಿಎಫ್ಓಗೆ ₹ 80 ಕೋಟಿ ಪಾವತಿಸಬೇಕು. ಅಷ್ಟೇಕೆ, ₹160 ಕೋಟಿ ಸಾಲ ಬೇಕೆಂದು ಬಿಎಂಟಿಸಿ ಆಹ್ವಾನಿಸಿದ್ದ ಟೆಂಡರ್‌ಗೆ ಯಾವುದೇ ಬ್ಯಾಂಕು ಮುಂದೆ ಬಂದಿಲ್ಲ. ನಿಗಮಗಳಲ್ಲಿ ಬಿಡಿ ಭಾಗಗಳು, ರೆಕ್ಸಿನ್, ಕಂಪ್ಯೂಟರ್ ಹಾಗೂ ಸರ್ವರ್‌ಗಳ ಖರೀದಿಯಲ್ಲೂ ಸಾಕಷ್ಟು ಅವ್ಯವಹಾರದ ಆರೋಪಗಳಿವೆ. ಅಗತ್ಯಕ್ಕಿಂತ ಹೆಚ್ಚು ಖರೀದಿ, ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ಮೊತ್ತ ನೀಡಿರುವುದು ಪತ್ತೆಯಾಗಿದೆ. ಜಾಗೃತ ದಳ ನೀಡಿದ ವರದಿಯಂತೆ 11 ಮಂದಿಯನ್ನು ಅಮಾನತುಗೊಳಿಸಲಾಗಿದೆ.
ವಾಯವ್ಯ ನಿಗಮದಲ್ಲಿ ಆಡಳಿತ ನಿರ್ದೇಶಕರ ಸಹಿ ನಕಲು ಮಾಡಿ 141 ಮಂದಿಯನ್ನು ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
ಬಾಡಿ ಕೋಚ್‌ಗಾಗಿ ₹ 117 ಕೋಟಿ ವೆಚ್ಚ ಮಾಡಿರುವ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿಪರ್ಯಾಸವೆಂದರೆ, ಕಾಲಮಿತಿ ಇಲ್ಲದೆ ನಡೆಯುವ ತನಿಖೆಗಳು ದಾರಿತಪ್ಪಿ ಹಳ್ಳ ಹಿಡಿಯುತ್ತಿವೆ. ತಪ್ಪಿತಸ್ಥರು ಶಿಕ್ಷೆಯಿಂದ ಜಾರಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಇದನ್ನೂ ಓದಿ...ಬಿಳಿಯಾನೆ ಸಾಕಿ ಬಡವಾಯ್ತು ಬಿಎಂಟಿಸಿ!
ಸಾರಿಗೆ ನಿಗಮವೆಂದರೆ ಚಾಲಕರು, ನಿರ್ವಾಹಕರೇ ಹೆಚ್ಚಿರುವ ಕಾರ್ಮಿಕ ಪ್ರಧಾನ ಇಲಾಖೆ. ಹೀಗಾಗಿ, ಇಲ್ಲಿ ಚಾಲಕರು ಹಾಗೂ ನಿರ್ವಾಹಕರ ಮೇಲೆ ನಾನಾ ದೂರುಗಳು ದಾಖಲಾಗುತ್ತವೆ. ಅಪಘಾತ, ಟಿಕೆಟ್ ನೀಡದೆ ಹಣ ಪಡೆದಿರುವುದು, ವಾಹನ ವಿರೂಪಗೊಳಿಸಿದ್ದು, ಸಕಾಲಕ್ಕೆ ರೂಟ್‌ನಲ್ಲಿ ವಾಹನ ಚಾಲನೆ ಮಾಡದಿರುವುದು, ನಿಗದಿತ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಬಸ್ ಚಲಾಯಿಸಿದ್ದು, ಪ್ರಯಾಣಿಕರ ಜತೆ ಅನುಚಿತ ವರ್ತನೆ... ಹೀಗೆ ನಾನಾ ದೂರುಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿವೆ. ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ವ್ಯಾಜ್ಯಗಳನ್ನು ತಡೆಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ನೌಕರ ಪ್ರೊಬೇಷನರಿ ಅವಧಿಯಲ್ಲಿದ್ದರೆ ದೂರಿನ ಕಾರಣ ಮುಂದಿಟ್ಟು ಸೇವೆ ಕಾಯಂಗೊಳಿಸುವುದಿಲ್ಲ. ಇಂಥ ಕಾರಣ ಮುಂದಿಟ್ಟುಕೊಂಡು ಕಿರುಕುಳ ನೀಡುವುದು ಸಾಮಾನ್ಯ ಎನ್ನುವುದು ನೌಕರರ ಅಳಲು.
ನಿರ್ಭೀತಿಯಿಂದ ಕೆಲಸ ಮಾಡಿದರೂ ತಪ್ಪು!
ಸಾರಿಗೆ ಇಲಾಖೆಯಲ್ಲಿ ಮಂತ್ರಿ-ಮಹೋದಯರು, ಶಾಸಕ– ಸಂಸದರು ಹಾಗೂ ಇತರೆ ಒತ್ತಡಗಳ ನಡುವೆಯೂ ನಿರ್ಭೀತಿಯಿಂದ ಕೆಲಸ ಮಾಡುವುದೂ ತಪ್ಪು!
ಮುಖ್ಯ ತಾಂತ್ರಿಕ ಎಂಜಿನಿಯರ್ ಹುದ್ದೆಯಿಂದ ಇದೇ ಫೆಬ್ರುವರಿಯಲ್ಲಿ ನಿವೃತ್ತರಾದ ಗಂಗಣ್ಣಗೌಡ ಅವರಂಥ ಕೆಲವು ಅಧಿಕಾರಿಗಳು ಇದಕ್ಕೆ ನಿದರ್ಶನ. ಅಕ್ರಮ ವ್ಯವಹಾರಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ, ಇನ್ನೇನು ನಿವೃತ್ತಿ ಕ್ಷಣ ಅಂತ್ಯಗೊಳ್ಳಲು ಎರಡು ಗಂಟೆ ಮಾತ್ರ ಬಾಕಿ ಇದೆ ಎಂದಾಗ ಅವರನ್ನು ಅಮಾನತುಗೊಳಿಸಲಾಗಿತ್ತು!
ಆದರೆ, ಗಂಗಣ್ಣಗೌಡ ಅವರ ಸತ್ಯಸಂಧತೆ ಅರಿತಿದ್ದ ಐಎಎಸ್ ಅಧಿಕಾರಿಗಳ ತಂಡ ಮುಖ್ಯಮಂತ್ರಿಯನ್ನು ಭೇಟಿಯಾಗಿ ವಾಸ್ತವ ವಿಷಯ ತಿಳಿಸಿದ ಬಳಿಕ ಅಮಾನತು ಆದೇಶ ಹಿಂತೆಗೆದುಕೊಳ್ಳಲಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಸಾರಿಗೆ ಸಿಬ್ಬಂದಿ.
ಇದನ್ನೂ ಓದಿ... ಸಾರಿಗೆ ಇಲಾಖೆಗಳಲ್ಲಿ ಕೊಳ್ಳೆ ಹೊಡೆದು ಸಿಕ್ಕಿಬಿದ್ದರು
*
ಇಲ್ಲಿ ಭ್ರಷ್ಟಾಚಾರ ಎನ್ನುವಂಥದ್ದು ದೇವರು. ಅದು ಸರ್ವಾಂತರ್ಯಾಮಿಯಲ್ಲವೇ. ದೇವರಿದ್ದಾನೆ ಎನ್ನುವುದಕ್ಕೆ ಸಾಕ್ಷ್ಯ ನೀಡಲು ಸಾಧ್ಯವೇ. ಹಾಗೇ ಸಾರಿಗೆ ಇಲಾಖೆಯಲ್ಲಿನ ಅಕ್ರಮ, ಅವ್ಯವಹಾರಗಳಿಗೆ ನಿಮಗೆ ಯಾವುದೇ ದಾಖಲೆ ಸಿಗದು.
-ಎಚ್.ವಿ. ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ. ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.