ADVERTISEMENT

ಪಿಯು: ‘ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ

ಶೇಕಡ 10ರಷ್ಟು ವರ್ಗಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:46 IST
Last Updated 16 ಡಿಸೆಂಬರ್ 2021, 21:46 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ವಿಧಾನ ಪರಿಷತ್ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್ ಪಾಟೀಲ್ ಮಾತುಕತೆಯಲ್ಲಿ ತೊಡಗಿದ್ದರು. ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಯು.ಬಿ ವೆಂಕಟೇಶ್ ಮತ್ತು ಎಂ ನಾರಾಯಣಸ್ವಾಮಿ ಇದ್ದರು -ಪ್ರಜಾವಾಣಿ ಚಿತ್ರ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ವಿಧಾನ ಪರಿಷತ್ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್ ಪಾಟೀಲ್ ಮಾತುಕತೆಯಲ್ಲಿ ತೊಡಗಿದ್ದರು. ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಯು.ಬಿ ವೆಂಕಟೇಶ್ ಮತ್ತು ಎಂ ನಾರಾಯಣಸ್ವಾಮಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಳಗಾವಿ (ಸುವರ್ಣ ವಿಧಾನಸೌಧ): ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿಯೇ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವರ್ಗಾವಣೆಗೂ ಅವಕಾಶ ಕಲ್ಪಿಸಲು ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ’ಗೆ ತಿದ್ದುಪಡಿ ತರಲಾಗುತ್ತಿದೆ.

ಈ ಉದ್ದೇಶದಿಂದ ವಿಧಾನಸಭೆಯಲ್ಲಿ ಗುರುವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಹೀಗಾಗಿ, ಇನ್ನು ಮುಂದೆ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಒಂದೇ ಕಾಯ್ದೆಯಡಿ ನಡೆಯಲಿದೆ.

ಉಪನ್ಯಾಸಕರಿಗೆ ಈವರೆಗೆ ಶೇ 8ರಷ್ಟು ವರ್ಗಾವಣೆಗೆ ಅವಕಾಶವಿತ್ತು. ಈ ತಿದ್ದುಪಡಿ ಕಾಯ್ದೆಯ ಮೂಲಕ ಅದನ್ನು ಶೇ 10ಕ್ಕೆ ಏರಿಸಲಾಗಿದೆ. ಪ್ರಾಂಶುಪಾಲರ ಅಥವಾ ಉಪನ್ಯಾಸಕರ ಆರಂಭಿಕ ನೇಮಕಾತಿ ಅಥವಾ ಬಡ್ತಿಯು ವಲಯ ‘ಸಿ’ಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆಗಿರಬೇಕು. ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಗೆ ರಾಜ್ಯವು ಏಕ ಘಟಕ ಆಗಿರುವುದರಿಂದ ಉಪನ್ಯಾಸಕರಿಗೆ ವಲಯ ವರ್ಗಾವಣೆ ಅನ್ವಯಿಸುವುದಿಲ್ಲ.

ADVERTISEMENT

ಉಪನ್ಯಾಸಕರು ವರ್ಗಾವಣೆಗೆ ಅರ್ಹವಾಗಿರುವ ಮತ್ತು 5 ವರ್ಷಗಳ ಬಾಕಿ ಉಳಿದ ಸೇವೆಯನ್ನು ಹೊಂದಿರುವ ಅಥವಾ ಕನಿಷ್ಠ 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಷರತ್ತಿಗೆ ಅನ್ವಯಿಸಿ ಒಮ್ಮೆ ಮಾತ್ರ ವರ್ಗಾವಣೆ ಅವಕಾಶ ಕಲ್ಪಿಸಲಾಗಿದೆ.

ಹಾಲಿ ಕಾಯ್ದೆಯ ಪ್ರಕಾರ, ನಿರ್ದಿಷ್ಟ ಹುದ್ದೆಗಳಿಗೆ ಶಿಕ್ಷಕರನ್ನು ವರ್ಗಾವಣೆ ಮಾಡುವಾಗ ಪರೀಕ್ಷೆ ನಡೆಸಿ, ಮೆರಿಟ್‌ ಆಧರಿಸಿ ಕೌನ್ಸೆಲಿಂಗ್‌ ಮೂಲಕ ಮಾತ್ರ ಸ್ಥಳ ನಿಯುಕ್ತಿಗೊಳಿಸಬೇಕು. ಅಂಥ ಹುದ್ದೆಗಳಿಗೆ ಕನಿಷ್ಠ ಮತ್ತು ಗರಿಷ್ಠ ಅವಧಿ ಕ್ರಮವಾಗಿ ಮೂರು ಮತ್ತು ಐದು ವರ್ಷಗಳು. ಆದರೆ, ಈ ನಿಯಮ ಉಪನ್ಯಾಸಕರಿಗೆ ಅನ್ವಯಿಸುವುದಿಲ್ಲ ಎಂದೂ ಮಸೂದೆಯಲ್ಲಿದೆ.

2018–19ರಲ್ಲಿ ಕಡ್ಡಾಯ ವರ್ಗಾವಣೆಯಾಗಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ, ಖಾಲಿ ಹುದ್ದೆಗಳ ಲಭ್ಯತೆ ಆಧರಿಸಿ ಅವರು ಕಾರ್ಯನಿರ್ವಹಿಸುತ್ತಿರುವ ಜ್ಯೇಷ್ಠತಾ ಘಟಕದೊಳಗೆ ಒಂದು ಬಾರಿ ವರ್ಗಾವಣೆಯ ಸ್ಥಳ ಆಯ್ಕೆ ಮಾಡಲು ಕೂಡಾ ಅವಕಾಶ ನೀಡಲಾಗಿದೆ.

ವರ್ಗಾವಣೆಗೆ ಸಂಬಂಧಿಸಿದ ಕುಂದುಕೊರತೆಗಳ ಪರಿಶೀಲನೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು (ಆಡಳಿತ) ಮತ್ತು ಉಪನಿರ್ದೇಶಕರು (ಆಡಳಿತ) ಅವರನ್ನು ಒಳಗೊಂಡ ಸಮಿತಿಯ ಮುಂದೆ ಅಂಥ ಕುಂದುಕೊರತೆಗಳ ನಿವಾರಣೆಗೆ ಅರ್ಜಿ ಸಲ್ಲಿಸಬಹುದು ಎಂದೂ ಮಸೂದೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.