ಬೆಳಗಾವಿ (ಸುವರ್ಣ ವಿಧಾನಸೌಧ): ’ಇದ್ಯಾವ ಅಭಿವೃದ್ಧಿ, ಇದಾ ನಿಮ್ಮ ನೀತಿ‘ ಎಂದು ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ಸದಸ್ಯ ಸಿದ್ದು ಸವದಿ ವಿಧಾನಸಭೆಯಲ್ಲಿ ಗುರುವಾರ ಹರಿಹಾಯ್ದರು.
ಬನಹಟ್ಟಿಯ ಹಳೆಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಅವಧಿಯಲ್ಲಿ ಸಿದ್ದು ಸವದಿ ಪ್ರಶ್ನೆ ಕೇಳಿದರು.’₹20 ಲಕ್ಷ ಮೊತ್ತದ ಕಾಮಗಾರಿ ಆರಂಭವಾಗಿ ಮೂರು ವರ್ಷವಾಗಿದ್ದು, ಕಾಮಗಾರಿ ಮುಗಿಸಲು ವಿಳಂಬ ಮಾಡಲಾಗುತ್ತಿದೆ. ಇದಾ ಅಭಿವೃದ್ಧಿ ನೀತಿ‘ ಎಂದೂ ಪ್ರಶ್ನಿಸಿದರು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ’ಯೋಜನೆಯ ಸ್ವರೂಪ ಬದಲಿಸಿ ಎಂದು ಸಿದ್ದು ಸವದಿ ಅವರೇ ಪತ್ರ ನೀಡಿದ ಕಾರಣಕ್ಕೆ ಸ್ವರೂಪ ಬದಲಿಸಲಾಗಿದೆ. ಹಾಗಾಗಿ, ಸ್ವಲ್ಪ ವಿಳಂಬವಾಗಿದೆ‘ ಎಂದರು.
ನೀವೇ ಪತ್ರ ನೀಡಿದ್ದೀರಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ’ನಾನು ಪತ್ರ ಕೊಟ್ಟಿಲ್ಲ. ಅಧಿಕಾರಿಗಳೇ ನನ್ನಿಂದ ಪತ್ರ ಬರೆಸಿಕೊಂಡರು‘ ಎಂದು ಸಿದ್ದು ಸವದಿ ಸಮಜಾಯಿಷಿ ನೀಡಿದರು. ಅದು ನೀವು ಪತ್ರ ಕೊಟ್ಟಂತೆಯೇ ಎಂದು ಕಾಗೇರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.