ಬೆಂಗಳೂರು: 225 ಶಾಸಕರ ಬಗ್ಗೆಯೂ ಕೀಳಾಗಿ ಮಾತನಾಡುವ ಮೂಲಕ ವಿಧಾನಸಭೆಗೆ ಅವಮಾನ ಮಾಡಿರುವ ಡಾ.ಕೆ. ಸುಧಾಕರ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅವರು ಶಾಸಕರಾಗಿಯೂ ಉಳಿಯಬಾರದು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.
ಪಕ್ಷದ ಶಾಸಕಿಯರ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ' ಸುಧಾಕರ್ ಆರೋಗ್ಯ ಸಚಿವರಲ್ಲ, ಅನಾರೋಗ್ಯ ಸಚಿವ. ಅವರು ಸಚಿವರಾಗಿರಲು ನಾಲಾಯಕ್. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣವೇ ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದರು.
ಸುಧಾಕರ್ ಶಾಸಕರಾಗಿ ಇರುವುದಕ್ಕೂ ಅರ್ಹರಲ್ಲ. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವ ನಿರ್ಧಾರವನ್ನು ವಿಧಾನಸಭೆಯ ಅಧ್ಯಕ್ಷರು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, 'ಎಲ್ಲ ಶಾಸಕರನ್ನೂ ಅವಮಾನಿಸಿರುವ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇ-ಮೇಲ್ ಮೂಲಕ ಮನವಿ ರವಾನಿಸಲಾಗುವುದು' ಎಂದರು.
ಮುಖ್ಯಮಂತ್ರಿ, ಸ್ಪೀಕರ್ ಸೇರಿದಂತೆ ಎಲ್ಲ ಶಾಸಕರ ಜೀವನದ ಬಗ್ಗೆಯೂ ಕಳಂಕ ಹೊರಿಸುವ ಕೆಲಸವನ್ನು ಸುಧಾಕರ್ ಮಾಡಿದ್ದಾರೆ. ಯಾವುದೇ ಶಾಸಕರ ಬಗ್ಗೆ ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದರು.
ಶಾಸಕಿ ರೂಪಾ ಶಶಿಧರ್ ಮಾತನಾಡಿ, 'ಸುಧಾಕರ್ ನೀಡಿರುವ ಹೇಳಿಕೆ ಅವರ ವ್ಯಕ್ತಿತ್ವದ ಮಟ್ಟವನ್ನು ಅನಾವರಣ ಮಾಡಿದೆ. ತಮ್ಮ ವಿರುದ್ಧದ ಆರೋಪದಿಂದ ಮುಕ್ತರಾಗಲು ಯಾವುದೇ ರೀತಿಯ ಹೋರಾಟ ನಡೆಸಲಿ. ಅದನ್ನಯ ಬಿಟ್ಟು ಎಲ್ಲ ಶಾಸಕರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದಿತ್ತು' ಎಂದರು.
ಸುಧಾಕರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಎಂದರು.
ಸ್ಪೀಕರ್ ಕ್ರಮ ಕೈಗೊಳ್ಳಬೇಕಿತ್ತು: 'ಅಸಭ್ಯವಾಗಿ ವರ್ತಿಸಿದ ಕಾರಣ ನೀಡಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಅವರನ್ನು ಸದನದಿಂದ ಅಮಾನತು ಮಾಡಿದ್ದ ಸ್ಪೀಕರ್ ಸುಧಾಕರ್ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಸದನಕ್ಕೆ ಅವಮಾನ ಮಾಡಿದ ವ್ಯಕ್ತಿಗೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, 'ರಾಜ್ಯದ ಶಾಸಕರೆಲ್ಲರನ್ನೂ ಜನರು ಅನುಮಾನದಿಂದ ನೋಡುವಂತಹ ಪರಿಸ್ಥಿತಿಯನ್ನು ಸುಧಾಕರ್ ಸೃಷ್ಟಿಸಿದ್ದಾರೆ. ರಾಜ್ಯಪಾಲರು ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.