ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಪ್ರಸಂಗಕರ್ತೃ, ವಾಗ್ಮಿ ಪ್ರೊ.ಎಂ.ಎ.ಹೆಗಡೆ (73) ಅವರು ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.
ಎಂ.ಎ.ಹೆಗಡೆ ಅವರಿಗೆ ಕೋವಿಡ್ ಸೋಂಕು ತಗುಲಿರುವುದುಏಪ್ರಿಲ್ 13ರಂದು ದೃಢಪಟ್ಟಿತ್ತು. ಶನಿವಾರ ಮುಂಜಾನೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತರಾಗಿದ್ದ ಅವರು ಎರಡನೇ ಅವಧಿಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕೋವಿಡ್–19ಲಾಕ್‌ಡೌನ್ ಅವಧಿಯಲ್ಲಿ ಹಿರಿಯ ಹಾಗೂ ಪ್ರಸಿದ್ಧ ಯಕ್ಷಗಾನ ಹಿರಿಯ ಕಲಾವಿದರ ಜೊತೆ ವರ್ಚುವಲ್ ರೂಪದಲ್ಲಿ ‘ಮಾತಿನ ಮಂಟಪ’ ಮಾತುಕತೆ ಕಾರ್ಯಕ್ರಮಆಯೋಜಿಸಿದ್ದರು. ಈ ಕಾರ್ಯಕ್ರಮದಡಿ 100ಕ್ಕೂ ಅಧಿಕ ಕಲಾವಿದರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು. ‘ಮಾತಿನ ಮಂಟಪ’ ಕಾರ್ಯಕ್ರಮದ ಮೂಲಕ 70 ವರ್ಷ ಮೀರಿದ ಕಲಾವಿದ ಸಂದರ್ಶನವನ್ನು ವರ್ಚುವಲ್ ರೂಪದಲ್ಲಿ ಕಟ್ಟಿಕೊಟ್ಟಿದ್ದರು. ಈ ಸರಣಿಯಲ್ಲಿ 50ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಅಕಾಡೆಮಿಯು ರೂಪಿಸಿತ್ತು. ಕಲಾವಿದರ ಸಾಧನೆ, ಚಿಂತನೆ ಹಾಗೂ ಅವರ ಕಲಾ ಬದುಕನ್ನು ಯಕ್ಷಗಾನದ ಅಭಿಮಾನಿಗಳಿಗೆ ತಿಳಿಸುವ ಈ ಕಾರ್ಯಕ್ರಮ ಸರಣಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಅಕಾಡೆಮಿ ಅಧ್ಯಕ್ಷರಾಗಿ ಕಲೆ, ಕಲಾವಿದರ ಉನ್ನತಿಗಾಗಿ ಎಂ.ಎ.ಹೆಗಡೆ ಅವರು ಸಾಕಷ್ಟು ಶ್ರಮಿಸಿದ್ದರು. ಕಲಾವಿದರ ವಲಯದಲ್ಲಿಯೂ ಹೆಗಡೆ ಅವರ ಬಗ್ಗೆ ಅಪಾರ ಗೌರವವಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.