ADVERTISEMENT

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:46 IST
Last Updated 1 ಸೆಪ್ಟೆಂಬರ್ 2024, 15:46 IST
ಎಚ್.ಎಸ್‌. ಮಂಜುನಾಥ್ ಗೌಡ
ಎಚ್.ಎಸ್‌. ಮಂಜುನಾಥ್ ಗೌಡ   

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯುವ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಎಚ್.ಎಸ್‌. ಮಂಜುನಾಥ್ ಗೌಡ ಮತ್ತು ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ನಡುವೆ ಪೈಪೋಟಿ ಏರ್ಪಟ್ಟಿದೆ.

ರಾಜ್ಯದಾದ್ಯಂತ ಯುವ ಕಾಂಗ್ರೆಸ್‌ ಸದಸ್ಯತ್ವ ಆಗಸ್ಟ್‌ 20ರಂದು ಆರಂಭವಾಗಿದ್ದು, ಸೆ. 20ಕ್ಕೆ ಕೊನೆಯಾಗಲಿದೆ. ಸದಸ್ಯತ್ವ ನೋಂದಣಿಯ ಜೊತೆಗೆ ನೂತನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಮೂಲಕ  ರಾಜಕೀಯಕ್ಕೆ ಬಂದಿರುವ ಮಂಜುನಾಥ್ ಗೌಡ, ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಎರಡು ಬಾರಿ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ, ಯುವ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ಅವರು, 2018ರ ಚುನಾವಣೆಯಲ್ಲಿ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಸದ್ಯ ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾಗಿರುವ ಅವರು, ವಿದ್ಯಾರ್ಥಿ, ಯುವ ಸಮುದಾಯದ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಕಾಂಗ್ರೆಸ್‌ ಮುಖಂಡರಾದ ರಾಜಗೋಪಾಲ್‌ ರೆಡ್ಡಿ– ಸುಶ್ಮಿತಾ ಅವರ ಪುತ್ರಿಯಾದ ದೀಪಿಕಾ ಕೂಡಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷ ಟಿಕೆಟ್‌ ನೀಡಲಿಲ್ಲವೆಂದು ಜೆಡಿಎಸ್‌ಗೆ ಜಿಗಿದಿದ್ದ ರಾಜಗೋಪಾಲ್‌ ರೆಡ್ಡಿ ಮತ್ತೆ ಮಾತೃ ಪಕ್ಷಕ್ಕಕ್ಕೆ ಮರಳಿದ್ದಾರೆ. ತಂದೆಗೆ ಟಿಕೆಟ್‌ ಸಿಗದ ಕಾರಣಕ್ಕೆ ಬೇಸರಗೊಂಡಿದ್ದ ದೀಪಿಕಾ ಕೂಡಾ ಜೆಡಿಎಸ್‌ ಸೇರಿದ್ದರು. ಮತ್ತೆ ಪಕ್ಷಕ್ಕೆ ಮರಳಿರುವ ಅವರು ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.