ADVERTISEMENT

ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 20:15 IST
Last Updated 8 ಫೆಬ್ರುವರಿ 2019, 20:15 IST
.
.   

ಬೆಂಗಳೂರು: ‘ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಬಜೆಟ್‌ನಲ್ಲಿ ₹12,650 ಕೋಟಿ ಕೊಡಲಾಗಿದೆ. ಇದಕ್ಕೆ ಹೆಚ್ಚುವರಿ ಅನುದಾನ ಬೇಕಿದ್ದರೆ ಕೊಡುವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಬಜೆಟ್‌ ಮಂಡನೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಣಿಜ್ಯ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾಕ್ಕೆ ₹6,500 ಕೋಟಿ ಹಾಗೂ ಸಹಕಾರ ಬ್ಯಾಂಕ್‌ಗಳಿಗೆ ₹6,150 ಕೋಟಿ ಒದಗಿಸಲಾಗಿದೆ. ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ ಜೂನ್‌ ಒಳಗೆ ಪೂರ್ಣಗೊಳ್ಳುತ್ತದೆ. ವಾಣಿಜ್ಯ ಬ್ಯಾಂಕ್‌ಗಳ ಯೋಜನೆಯು 2019–20ರ ಆರ್ಥಿಕ ಸಾಲಿನಲ್ಲಿ ಪೂರ್ಣಗೊಳ್ಳುತ್ತದೆ’ ಎಂದರು.

‘ಕಳೆದ ಬಜೆಟ್‌ನಲ್ಲಿ ಸಹಕಾರ ಬ್ಯಾಂಕ್‌ಗಳಿಗೆ ₹2,600 ಕೋಟಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಗೆ ₹6,500 ಕೋಟಿ ಕೊಡಲಾಗಿತ್ತು. ಈಗಾಗಲೇ 4 ಲಕ್ಷ ರೈತರ ಸಾಲ ಖಾತೆಗಳಿಗೆ ಹಣ ಪಾವತಿಯಾಗಿದೆ’ ಎಂದರು.

ADVERTISEMENT

‘ಎನ್‌ಪಿಎ ಸಾಲ ಮೊತ್ತಗಳನ್ನು ಏಕ ಗಂಟಿನಲ್ಲಿ ಮರುಪಾವತಿ ಮಾಡಿದರೆ ರಿಯಾಯಿತಿ ನೀಡುವ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಜತೆಗೆ ಮಾತುಕತೆ ಮುಂದುವರಿದಿದೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ 5 ಸಾವಿರ ಜನರ ಸಾಲವಷ್ಟೇ ಮನ್ನಾ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿದ್ದಾರೆ. ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.