ADVERTISEMENT

ಬಜೆಟ್‌: ಯಾರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 20:00 IST
Last Updated 8 ಫೆಬ್ರುವರಿ 2019, 20:00 IST
   

ಬೆಂಗಳೂರು:ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ವಿವಿಧ ಕ್ಷೇತ್ರಗಳಿಂದ ಹಲವು ತಜ್ಞರು, ನಾಯಕರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಬರ ಮತ್ತು ಸಾಲದ ಸಮಸ್ಯೆಗಳ ನಿವಾರಣೆಗೆ ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕಿತ್ತು. ಶೂನ್ಯ ಬಂಡವಾಳ, ನೈಸರ್ಗಿಕ ಮತ್ತು ಸಾವಯವ ಕೃಷಿಗಳಿಗೆ ಪ್ರತ್ಯೇಕವಾಗಿ ಆದ್ಯತೆ ನೀಡುತ್ತಿರುವುದು ಉತ್ತಮ ಕ್ರಮವಲ್ಲ.

–ಚುಕ್ಕಿ ನಂಜುಂಡಸ್ವಾಮಿ, ರೈತರಪರ ಹೋರಾಟಗಾರ್ತಿ

ADVERTISEMENT

‘ಸಮಾನ ಹಂಚಿಕೆಯಾಗಿಲ್ಲ’

ಬಜೆಟ್‌ ಅನುದಾನ ಸಮಾನವಾಗಿ ಹಂಚಿಕೆಯಾಗಿಲ್ಲ. ಪ್ರಾದೇಶಿಕ ಅಸಮಾನತೆ ಮುಂದುವರಿದಿದೆ.ವಿಶೇಷ ಯೋಜನೆಗಳನ್ನು ದಕ್ಷಿಣಕ್ಕೆ ಹಾಕಿಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕಾದ ಕೆಲವು ನಿರ್ಣಯಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ವಿಶೇಷತೆ ಇಲ್ಲ.

–ಡಾ.ರಜಾಕ್‌ ಉಸ್ತಾದ್‌,ಉಪಾಧ್ಯಕ್ಷ,ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕ

‘ಬೇಡಿಕೆಯಷ್ಟು ಅನುದಾನ ಕೊಟ್ಟಿಲ್ಲ’

ನೀರಾವರಿ ಯೋಜನೆಗಳಿಗೆ ಕನಿಷ್ಟ ₹1 ಲಕ್ಷ ಹಾಗೂ ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ₹5 ಸಾವಿರ ಕೋಟಿ ಅನುದಾನ ಮೀಸಲಿಡಬೇಕಿತ್ತು. ಕೇರಳ ಮಾದರಿಯಲ್ಲಿ ಸಾಲ ಪರಿಹಾರ ಆಯೋಗ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ.

–ಮಾರುತಿ ಮಾನ್ಪಡೆ,ಉಪಾಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

* ರೈತರ ವೋಟಿಗಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಿಮಿಕ್‌ ಬಜೆಟ್‌ ಮಂಡಿಸಿದ್ದಾರೆ. ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಯಾವ ಅಂಶವೂ ಇಲ್ಲ. ಸಾಲ ಮನ್ನಾ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ. ಬಜೆಟ್‌ ಮೇಲಿಟ್ಟಿದ್ದ ರೈತರ ನಿರೀಕ್ಷೆಗಳು ಸುಳ್ಳಾಗಿವೆ. ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ, ನೈಸರ್ಗಿಕ ಕೃಷಿಗೆ ಒತ್ತು ನೀಡಿರುವುದು ಸ್ವಾಗತಾರ್ಹ.

–ಬಡಗಲಪುರ ನಾಗೇಂದ್ರ, ರೈತ ಸಂಘ, ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ

* ಆನೆ ಸಂಘರ್ಷಕ್ಕೆ ಪರಿಹಾರ ಕೊಂಡುಕೊಳ್ಳುವತ್ತ ಗಮನಹರಿಸಿರುವುದು ಪ್ರಶಂಸನೀಯ. ಹಾಗೆಯೇ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಾದ ಎಂ.ಆರ್. ಮತ್ತು ಪಿ.ಸಿ.ಪಿ ಅರಣ್ಯ ವೀಕ್ಷಕರಿಗೆ ಉತ್ತೇಜನ ಭತ್ಯೆಗೆ ಅನುದಾನವನ್ನು ಬಿಡುಗಡೆ ಮಾಡಬೇಕಿತ್ತು. ವನ್ಯಜೀವಿಗಳಿಂದಾದ ಬೆಳೆ ಹಾನಿ ಮತ್ತು ಸಂಘರ್ಷದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ಹೆಚ್ಚುಗೊಳಿಸಬೇಕಿತ್ತು.
–ಸಂಜಯ್ ಗುಬ್ಬಿ,ವನ್ಯಜೀವಿ ವಿಜ್ಞಾನಿ

*ವಸತಿಹೀನರ ಪ್ರಧಾನ ಸಮಸ್ಯೆ ನಿವೇಶನದ್ದು. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ₹ 50 ಕೋಟಿಗಿಂತ ಹೆಚ್ಚು ಬೆಲೆಬಾಳುವ ಬಂಗಲೆಯುಳ್ಳ ಶಾಸಕರಿರುವ ಸರ್ಕಾರದಲ್ಲಿ, ವಸತಿ ಯೋಜನೆಗೆ ಕೇವಲ ₹ 50 ಕೋಟಿ ನೀಡಿರುವುದು ಕ್ರೂರವಾದ ತಮಾಷೆ.

–ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತೆ

* ಪ್ರತಿಯೊಂದು ವರ್ಗವನ್ನೂ ಗಮನದಲ್ಲಿಟ್ಟುಳ್ಳಲಾಗಿದೆ. ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿದ್ದು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ, ಹಾಸನದಲ್ಲಿ ವಿಮಾನ ನಿಲ್ದಾಣದಿಂದ ಈ ಪ್ರದೇಶಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ.

ಸುಧಾಕರ ಎಸ್‌. ಶೆಟ್ಟಿ,ಎಫ್‌ಕೆಸಿಸಿಐ ಅಧ್ಯಕ್ಷ

* ಸಮತೋಲಿತ ಬಜೆಟ್‌ ಮಂಡನೆಯಾಗಿದೆ. ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ, ರೈತ ಸಮುದಾಯಕ್ಕೆ ವಿವಿಧ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಗಮನ ನೀಡಿರುವುದು ಸ್ವಾಗತಾರ್ಹ

ಕಿಶೋರ್‌ ಆಳ್ವಾ,ಬಿಸಿಐಸಿ ಅಧ್ಯಕ್ಷ

* ಎಂಎಸ್‌ಎಂಇ ಬೆಳವಣಿಗೆಗೆ ಆಶಾದಾಯಕವಲ್ಲದಿದ್ದರೂ ನಿರಾಶಾದಾಯಕವಾಗಿಲ್ಲ. ’ಎಂಎಸ್‌ಎಂಇ–ಸಾರ್ಥಕ್’ ಯೋಜನೆಯಿಂದ ಅನುಕೂಲವಾಗುವ ನಿರೀಕ್ಷೆ ಇದೆ. ‌ಬಜೆಟ್ ಪೂರ್ವ ನಿವೇದನೆಗಳಿಗೆ ಸ್ಪಂದಿಸದಿರುವುದು ಆತಂಕ ಮೂಡಿಸಿದೆ.

ಬಸವರಾಜ್‌ ಎಸ್‌. ಜವಳಿ,ಕಾಸಿಯಾ ಅಧ್ಯಕ್ಷ

* ಕೈಗಾರಿಕೆ, ಸಾರಿಗೆ, ನಗರಾಭಿವೃದ್ಧಿ ಕ್ಷೇತ್ರಗಳಿಗೆ ಒತ್ತು ನೀಡಿರುವ ಉತ್ತಮ ಬಜೆಟ್‌. ಬೆಂಗಳೂರನ್ನು ಬಹುವಿಧ ಸಾರಿಗೆ ಕೇಂದ್ರವಾಗಿ ರೂಪಿಸುವ ದಿಸೆಯಲ್ಲಿನ ವಿನ್ಯಾಸ ಮತ್ತು ₹ 23 ಸಾವಿರ ಕೋಟಿ ಮೊತ್ತದ ಉಪನಗರ ರೈಲು ಯೋಜನೆ ಅನುಷ್ಠಾನ ಉತ್ತಮ.

ಲೋಕೇಶ್‌ ಹೆಬ್ಬಾನಿ,ವಿಶ್ವಬ್ಯಾಂಕ್‌ ಸಲಹೆಗಾರ, ಸಾರಿಗೆ ಮತ್ತು ರಸ್ತೆ ಸುರಕ್ಷತೆ

*ಬಾಗಲಕೋಟೆ ಜಿಲ್ಲೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಿವೆ. ಇಲ್ಲಿಗೆ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಮನ್ನಣೆ ಸಿಕ್ಕಿಲ್ಲ. ಮುಖ್ಯಮಂತ್ರಿ ತವರು ಜಿಲ್ಲೆಗೆ ವಿಮಾನ ನಿಲ್ದಾಣ ಘೋಷಿಸಿಕೊಂಡಿದ್ದಾರೆ

– ಹಣಮಂತ ಪಾಟೀಲ, ವ್ಯಾಪಾರಿ, ಬಾಗಲಕೋಟೆ

* ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಮಧ್ಯೆ ಮೆಟ್ರೊ ರೈಲು ಯೋಜನೆ ಜಾರಿಗೆ ಕಾರ್ಯ ಸಾಧ್ಯತಾ ವರದಿ ಪ್ರಸ್ತಾವ ಸ್ವಾಗತಾರ್ಹ. ಇದು ಬಹಳ ದಿನಗಳ ನಿರೀಕ್ಷೆ. ಕೇವಲ ಘೋಷಣೆ ಆಗದೆ, ಜಾರಿಯಾಗಬೇಕು

–ಡಾ. ಶಿವಾನಂದ ಹಿರೇಮಠ,ಮನೋವೈದ್ಯರು, ಹುಬ್ಬಳ್ಳಿ

* ಬಜೆಟ್‌ ಮೇಲೆ ರೈತರು, ಮಹಿಳೆಯರು, ಮಕ್ಕಳ ನಿರೀಕ್ಷೆ ದೊಡ್ಡದಾಗಿತ್ತು. ನಿರೀಕ್ಷೆ ಈಡೇರಿಲ್ಲ. ಆದರೆ, ಎಲ್ಲ ಕ್ಷೇತ್ರಗಳಿಗೂ ಹಣ ಹಂಚುವಲ್ಲಿ ಮುಖ್ಯಮಂತ್ರಿ ಸಫಲರಾಗಿದ್ದಾರೆ

–ಸುನಂದಾ ಜಯರಾಂ, ರೈತನಾಯಕಿ, ಮಂಡ್ಯ

* ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ಸಿಕ್ಕಿದೆ. ಎಲ್ಲ ವರ್ಗದ ಜನರ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಒಳ್ಳೆಯ ಯೋಜನೆ ಘೋಷಿಸಿದ್ದಾರೆ.

ಜಿ.ಸಿ.ಬಯ್ಯಾರೆಡ್ಡಿಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ

*ಕೃಷಿ ಭಾಗ್ಯ, ಕೆರೆ ತುಂಬಿಸುವುದು ಸೇರಿದಂತೆ ಸಮಗ್ರವಾಗಿದೆ. ಆದರೆ, ಕೆಲವು ಯೋಜನೆಗಳಿಗೆ ಮೊತ್ತ ಕಡಿಮೆಯಾಗಿದೆ. ಬರ ನಿರ್ವಹಣೆಗೆ ಶಾಶ್ವತ ಯೋಜನೆಯೊಂದನ್ನು ರೂಪಿಸುವ ಕೆಲಸ ಆಗಬೇಕಿತ್ತು.

ಎಸ್‌.ಎ. ಪಾಟೀಲ, ವಿಶ್ರಾಂತ ಕುಲಪತಿ

*ಬಡಮಹಿಳೆಯರು ಖಾಸಗಿ ಸಂಘ ಸಂಸ್ಥೆಗಳ ಸಾಲ ಹಾಗೂ ಬಡ್ಡಿಯ ಜಾಲದಲ್ಲಿ ಸಿಲುಕಿ ನರಳುತ್ತಿದ್ದಾರೆ. ಹೀಗಾಗಿ, ಸರ್ಕಾರವೇ ಬಡ್ಡಿರಹಿತ ಸಾಲ ನೀಡುವ ಯೋಜನೆ ಘೋಷಿಸಿದ್ದರೆ ಖಾಸಗಿ ಜಾಲದಿಂದ ಮಹಿಳೆಯರು ಮುಕ್ತರಾಗುತ್ತಿದ್ದರು

–ಅಕ್ಷತಾ ಹುಂಚದಕಟ್ಟೆ, ಕವಯತ್ರಿ

* ವಸತಿಯೋಜನೆಯಲ್ಲಿ ದಮನಿತ ಮಹಿಳೆಯರಿಗೆ ಮೀಸಲಾತಿ ಸ್ವಾಗತಾರ್ಹ. ಮಕ್ಕಳಸ್ನೇಹಿ ನ್ಯಾಯಾಲಯ ಶೀಘ್ರ ಕಾರ್ಯರೂಪಕ್ಕೆ ಬರಲಿ. ಅಂಗನವಾಡಿಗಳನ್ನು ಶಿಕ್ಷಣ ಯೋಜನೆಗೆ ಜೊತೆಯಾಗಿಸಿ ‘ಮಕ್ಕಳಮನೆ’ ಜಾರಿಗೆ ತಂದಿದ್ದರೆ ಉತ್ತಮವಾಗಿರುತ್ತಿತ್ತು.

–ಅಖಿಲಾ ವಿದ್ಯಾಸಂದ್ರ, ವಕೀಲೆ

* 2017ರ ಬಜೆಟ್‌ನಲ್ಲಿ 176 ಪಬ್ಲಿಕ್ ಶಾಲೆ ತೆರೆಯುತ್ತೇವೆ ಎಂದಿದ್ದರು. 2018ರಲ್ಲೂ ಅದೇ ಸಂಖ್ಯೆ ಪುನರುಚ್ಛರಿಸಿದ್ದರು. ಈಗ 1,000 ಪಬ್ಲಿಕ್ ಶಾಲೆ ಪ್ರಾರಂಭಿಸುವುದಾಗಿ ಹೇಳುತ್ತಿದ್ದಾರೆ. ಇದೆಲ್ಲ ಅಂಕಿ ಅಂಶಗಳ ಮೇಲಾಟವಷ್ಟೇ.

–ಬಿ.ಶ್ರೀಪಾದ ಭಟ್, ಶಿಕ್ಷಣ ತಜ್ಞ

* ಕರ್ನಾಟಕ ಪಬ್ಲಿಕ್ ಸ್ಕೂಲ್ , ಹೋಬಳಿ ಮಟ್ಟದ ಅಲೆಮಾರಿ, ಅರೆ-ಅಲೆಮಾರಿ, ಪರಿಶಿಷ್ಟ ಜಾತಿ, ಪಂಗ, ಇತರೆ ಹಿಂದುಳಿದ ವರ್ಗಗಳನ್ನೊಳಗೊಂಡ ವಸತಿ ಶಾಲೆಯ ಕಲ್ಪನೆ ಅಹಿಂದ ತತ್ವವನ್ನು ಬಲಪಡಿಸಿರುವುದು ಅಭಿನಂದನೀಯ.

–ಡಾ.ಭಾವನಾ ಹಾಲಾನಾಯಕ್, ಆರ್ಥಿಕ ವಿಷಯ ತಜ್ಞೆ

*ಆರೋಗ್ಯವಿಮೆ ಯೋಜನೆಯಲ್ಲಿ ಕೇಂದ್ರ ಮಾಡಿದ ತಪ್ಪನ್ನೇ ರಾಜ್ಯಸರ್ಕಾರ ಮಾಡಿದೆ. ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಲಾಭ ಮಾಡಿಕೊಡಲು ಹೊರಟಿದೆ. ಮ್ಯಾಮೊಗ್ರಫಿ, ಪ್ಯಾಪ್‌ಸ್ಮಿಯರ್ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಬಾರದು.

–ಅಖಿಲಾ ವಾಸನ್, ಸಂಚಾಲಕಿ, ಜನಾರೋಗ್ಯ ಚಳವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.