ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಕೃಷಿ ಸಾಲ ಮನ್ನಾ ಯೋಜನೆಗೆ 2018–19ರ ಸಾಲಿನ ಬಜೆಟ್‌ನಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ₹12,650 ಕೋಟಿ ಮೀಸಲಿಟ್ಟಿದೆ.
ರೈತರು ವಾಣಿಜ್ಯ ಬ್ಯಾಂಕುಗಳಿಂದ ಪಡೆದಿದ್ದ ಸಾಲ ಮರು ಪಾವತಿಗೆ ₹6,500 ಕೋಟಿ ಮತ್ತು ಸಹಕಾರ ಕ್ಷೇತ್ರದಿಂದ ಪಡೆದ ಸಾಲ ಪಾವತಿಗೆ ₹6,150 ಕೋಟಿ ತೆಗೆದಿಡಲಾಗಿದೆ.
ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಪ್ರಕ್ರಿಯೆ ಇದೇ ಜೂನ್ ವೇಳೆಗೆ ಮತ್ತು ವಾಣಿಜ್ಯ ಬ್ಯಾಂಕುಗಳ ಪ್ರಕ್ರಿಯೆ 2019–20ರಲ್ಲಿ ಪೂರ್ಣಗೊಳ್ಳಲಿದೆ.
ರೈತರ ಸಾಲ ಮನ್ನಾ ಯೋಜನೆಗೆ ಸರ್ಕಾರ ಈವರೆಗೆ ₹5,450 ಕೋಟಿ ಬಿಡುಗಡೆ ಮಾಡಿದ್ದು, 12 ಲಕ್ಷ ರೈತರು ಇದರ ಲಾಭ ಪಡೆದಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದ ಒಟ್ಟು 42 ಲಕ್ಷ ರೈತರ ಅಂದಾಜು ₹46 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು.
ಸಾಲ ಪರಿಹಾರ ಆಯೋಗ
ಕೃಷಿ, ಗ್ರಾಮೀಣಾಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ನೀರಾವರಿ, ಸಣ್ಣ ನೀರಾವರಿ ಮತ್ತು ಸಹಕಾರ ಕ್ಷೇತ್ರಗಳಿಗೆ ಹಲವು ಹೊಸ ಯೋಜನೆಗಳನ್ನುಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ ಎರಡನೇ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ‘ಸಾಲ ಪರಿಹಾರ ಆಯೋಗ’ ಸ್ಥಾಪಿಸುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಸರ್ಕಾರ ಹೇಳಿದೆ.
ಪ್ರತ್ಯೇಕ ಬೆಳೆ ವಿಮೆ
ಕಳೆದ ಎರಡು ವರ್ಷಗಳಲ್ಲಿ ‘ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ’ಯಿಂದ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದ್ದು, ರೈತರಿಗೆ ಹೆಚ್ಚಿನ ಲಾಭವಾಗಿಲ್ಲ. ಇದರಿಂದ ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮಾ ಯೋಜನೆ ಜಾರಿಗೆ ಚಿಂತನೆ ನಡೆದಿದೆ ಎಂದು ಹೇಳಿದೆ.
ಬೆಂಬಲ ಬೆಲೆಗೆ ‘ರೈತ ಕಣಜ’
ರಾಜ್ಯದಲ್ಲಿ 12 ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಂರಕ್ಷಣಾ ವ್ಯವಸ್ಥೆಗೆ ಆವರ್ತಕ ನಿಧಿ ಮೂಲಕ ಅನುದಾನ ಒದಗಿಸಲು ‘ರೈತ ಕಣಜ’ ಯೋಜನೆ ಘೋಷಿಸಲಾಗಿದೆ.
ಗೃಹ ಲಕ್ಷ್ಮಿ ಬೆಳೆಸಾಲ
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆಭರಣ ಅಡವಿನ ಮೇಲೆ ಶೇ 3ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ‘ಗೃಹ ಲಕ್ಷ್ಮಿ ಬೆಳೆಸಾಲ ಯೋಜನೆ’ ಆರಂಭಿಸಲಾಗುವುದು.
ಸಿರಿಧಾನ್ಯ ರೈತರಿಗೆ ‘ರೈತಸಿರಿ’
ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ‘ರೈತಸಿರಿ’ ಎಂಬ ಹೊಸ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಯೋಜನೆ ಅಡಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ನಗದು ಪ್ರೋತ್ಸಾಹ ಧನ ನೀಡಲು ₹10 ಕೋಟಿ ಅನುದಾನ ತೆಗೆದಿಡಲಾಗಿದೆ.
ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹5ನಿಂದ ₹6ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಹೆಚ್ಚುವರಿಯಾಗಿ ಸರ್ಕಾರದ ಬೊಕ್ಕಸದ ಮೇಲೆ ₹1,459 ಕೋಟಿ ಆರ್ಥಿಕ ಹೊರೆ ಬೀಳಲಿದೆ.
ಕೃಷಿ ಜಿಡಿಪಿ ಕುಸಿತದ ಆತಂಕ
ರಾಜ್ಯದಲ್ಲಿ ಮಳೆಯ ಅಭಾವದಿಂದ ಉಂಟಾಗಿರುವ ಬರ ಪರಿಸ್ಥಿತಿಯಿಂದ ಕೃಷಿ ವಲಯದಲ್ಲಿ ಶೇ 4.8ರಷ್ಟು ಬೆಳವಣಿಗೆ ಕುಂಠಿತ ಆಗಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಇದೇ ಕಾರಣಕ್ಕಾಗಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರ (ಜಿಡಿಪಿ) ಸ್ವಲ್ಪ ಮಟ್ಟಿನ ಕುಸಿತವಾಗಬಹುದು ಎಂದು ಅಂದಾಜಿಸಿದೆ.
ಹೊಸ ಸಂಸ್ಥೆಗಳ ಸ್ಥಾಪನೆ
ಅಂತರ್ಜಲ ಸಂರಕ್ಷಣೆಗೆ ಜಲಾಮೃತ
ರಾಜ್ಯ ಸರ್ಕಾರ 2019 ವರ್ಷವನ್ನು ಜಲವರ್ಷ ಎಂದು ಘೋಷಿಸಿದೆ. ಅಂರ್ಜಲ ಸಂರಕ್ಷಣೆಗೆ ‘ಜಲಾಮೃತ’ ಯೋಜನೆ ಘೋಷಿಸಿದ್ದು, ₹ 500 ಕೋಟಿ ಅನುದಾನ ಮೀಸಲಾಗಿಟ್ಟಿದೆ.
ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ₹4000 ಕೋಟಿ ವೆಚ್ಚದಲ್ಲಿ ‘ಜಲಧಾರೆ’ ಮೊದಲ ಹಂತದ ಯೋಜನೆ ಆರಂಭವಾಗಲಿದೆ.
* ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ ₹5 ಕೋಟಿ
* ರೈತ ಸಮೂಹಕ್ಕೆ ತರಬೇತಿ, ಪ್ರಾತ್ಯಕ್ಷಿಕೆ ನೀಡಲು ರಾಯಚೂರಿನ ಸಿಂಧನೂರು ಮತ್ತು ಮಂಡ್ಯದ ವಿ.ಸಿ. ಫಾರಂನಲ್ಲಿ ತಲಾ ಒಂದು ವಿಶ್ವದರ್ಜೆಯ ಶಾಶ್ವತ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆಗೆ ಈ ಸಾಲಿನಲ್ಲಿ ₹10 ಕೋಟಿ
* ರಾಮನಗರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆಗೆ ₹20 ಕೋಟಿ
* ಗದಗ, ಹಾವೇರಿ, ಕುಂದಗೋಳ, ಹುಬ್ಬಳ್ಳಿ ಹಾಗೂ ಅಣ್ಣಿಗೇರಿಯಲ್ಲಿ ಮೆಣಸು ಮತ್ತು ಹೆಸರುಕಾಳು ಬೆಳೆಗಳ ಗುಣವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಲು ₹160 ಕೋಟಿ
* ರಾಜ್ಯದ 5 ತರಕಾರಿ ಮಾರುಕಟ್ಟೆಗಳಲ್ಲಿ ಒಟ್ಟು ₹10 ಕೋಟಿ ವೆಚ್ಚದಲ್ಲಿ ಸಮಗ್ರ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆ
* ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆಗೆ ₹5 ಕೋಟಿ
* ಎಲ್ಲ ಕೃಷಿ ಮಾರುಕಟ್ಟೆಗಳಲ್ಲಿ ವರ್ಷವಿಡಿ ಶಾಶ್ವತ ಸಂಗ್ರಹಣಾ ಕೇಂದ್ರ ಆರಂಭಿಸಲು ₹510 ಕೋಟಿ
‘ಬೆಲೆ ಕೊರತೆ ಪಾವತಿ ಯೋಜನೆ’
* ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೊ ಉತ್ಪನ್ನಗಳ ಬೆಲೆ ಕುಸಿತ ಸಂದರ್ಭದಲ್ಲಿ ‘ಬೆಲೆ ಕೊರತೆ ಪಾವತಿ ಯೋಜನೆ’ ಜಾರಿಗೆ ₹50 ಕೋಟಿ
* ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 500 ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರಗಳ ಖರೀದಿಗೆ ₹5 ಕೋಟಿ
* ರಾಮನಗರ ಮತ್ತು ಹಾವೇರಿ ರೇಷ್ಮೆ ಮಾರುಕಟ್ಟೆ ಆಧುನೀಕರಣಕ್ಕೆ ₹10 ಕೋಟಿ
ಕಾರ್ಮಿಕರ ಆಶ್ರಯಕ್ಕೆ ‘ಶ್ರಮಿಕ ಸೌರಭ’
ರಾಜ್ಯದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ‘ಶ್ರಮಿಕ ಸೌರಭ’ ಯೋಜನೆ ಘೋಷಿಸಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಮಿಕ ಗೃಹಭಾಗ್ಯ ಯೋಜನೆಯ ಅಡಿ ಕಾರ್ಮಿಕರು ಮನೆ ಕಟ್ಟಲು ₹ 5 ಲಕ್ಷ ಮುಂಗಡ ಹಣ ನೀಡಲಾಗುವುದು.
ಕಳೆದ ಬಾರಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ಚಾಲನೆ ನೀಡಿದ್ದ ಸರ್ಕಾರ, ಈ ಬಾರಿ ಸ್ವಂತ ಮನೆ ಹೊಂದಿರುವ ಕಾರ್ಮಿಕರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ₹20 ಸಾವಿರ ನೆರವು ನೀಡಲು ಮುಂದಾಗಿದೆ.
ಅಲ್ಲದೇ ಆರೋಗ್ಯ ಭಾಗ್ಯ ಸೌಲಭ್ಯ ಯೋಜನೆಯ ಅಡಿ ಕಾರ್ಮಿಕರಿಗೆ ₹1.5 ಲಕ್ಷ ಮರುಪಾವತಿ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಮೃತಪಟ್ಟರೆ ₹ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಉತ್ತೇಜಿಸಲು ನುರಿತ ತಜ್ಞರು ಮತ್ತು ಆಧುನಿಕ ವಿನ್ಯಾಸಕಾರರ ಸಹಯೋಗದೊಂದಿಗೆ ‘ಕೌಶಲ್ಯ ಪರಂಪರೆ ಶಾಲೆ’ ಎಂಬ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
ಚಾಲಕರ ದಿನ ಆಚರಣೆ:
ರಾಜ್ಯದಲ್ಲಿರುವ ವಿವಿಧ ವಲಯಗಳ ಉತ್ತಮ ಚಾಲಕರನ್ನು ಗುರುತಿಸಿ ಅಪಘಾತ ರಹಿತ ಚಾಲಕರಿಗೆ ಪ್ರತಿ ಜಿಲ್ಲೆಗೆ 10ರಂತೆ ₹ 25 ಸಾವಿರ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.
ಕಾರ್ಮಿಕರಿಗೆ ಭರಪೂರ ಕೊಡುಗೆ
*ಕಾರ್ಮಿಕ ಮಕ್ಕಳ ಸ್ವಯಂ ಉದ್ಯೋಗಕ್ಕೆ ₹50 ಸಾವಿರ ಪ್ರೋತ್ಸಾಹ ಧನ
*ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ ಸ್ಥಾಪನೆ ಹಾಗೂ ಮತ್ತಿತರ ಅನುಕೂಲಕ್ಕಾಗಿ ₹ 10 ಕೋಟಿ ಪ್ಯಾಕೆಜ್
*ಎಲೆಕ್ಟ್ರಿಕ್ ಆಟೊ ಖರೀದಿಗೆ ಸಹಾಯಧನ, ಸಾರಿಗೆ ಇಲಾಖೆ ಮೂಲಕ ₹30 ಕೋಟಿ ವಿತರಣೆ
* ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯ ಅಡಿ 70 ಸಾವಿರ ಹೊಸ ಅಭ್ಯರ್ಥಿಗಳ ₹ 90 ಕೋಟಿ ವೆಚ್ಚದಲ್ಲಿ ತರಬೇತಿ ಕಾರ್ಯಕ್ರಮ
* ‘ಸುಭದ್ರ’ ಶಾಲೆ ಯೋಜನೆಯ ಅಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ₹ 90 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ
* ಕಸ ಮರು ಬಳಕೆಗಾಗಿ ಸ್ವಚ್ಛಮೇವ ಯೋಜನೆ ಅಡಿ ಆಂದೋಲನ
* ಗ್ರಾಮ ಪಂಚಾಯಿತಿ ಆಸ್ತಿಗಳ ಡಿಜಿಟಲೀಕರಣ
* ಗ್ರಾಮ ಪಂಚಾಯಿತಿ ಅನಿರ್ಬಂಧಿತ ಅಭಿವೃದ್ಧಿ ಯೋಜನೆಯ ಅಡಿ ನೀಡಲಾಗುತ್ತಿದ್ದ ಅನುದಾನವನ್ನಿ ₹ 8 ಕೋಟಿಯಿಂದ ₹17 ಕೋಟಿಗೆ ಹೆಚ್ಚಳ
* ಇವನ್ನೂ ಓದಿ...
*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ
* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’
*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ
*ಬಜೆಟ್: ಯಾರು ಏನಂತಾರೆ?
*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ
*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ
*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ
*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ
*ಬೆಂಗಳೂರೇ ಮೊದಲು; ಉಳಿದವು ನಂತರ...
*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ
*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್
*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ
*ಮತ ಫಸಲಿಗಾಗಿ ಕುಮಾರ ಬಿತ್ತನೆ
*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ
*ಸಹಸ್ರ ಶಾಲೆಗಳ ಸ್ಥಾಪನೆ
*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು
*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ
*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ
*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ
*ಆನ್‌ಲೈನ್ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ
*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ
*ಬಜೆಟ್: ಯಾರು ಏನಂತಾರೆ?
*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.