ADVERTISEMENT

ಕರ್ನಾಟಕದ ಜಿಡಿಪಿ ದೇಶದಲ್ಲೇ ಅಧಿಕ: ಮುಖ್ಯಮಂತ್ರಿ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:49 IST
Last Updated 21 ಅಕ್ಟೋಬರ್ 2024, 15:49 IST
<div class="paragraphs"><p>ಜಿಡಿಪಿ</p></div>

ಜಿಡಿಪಿ

   

ಬೆಂಗಳೂರು: ಕರ್ನಾಟಕದ 2023-24ನೇ ಸಾಲಿನ ಜಿಡಿ‍ಪಿ ಶೇ 10.2ರಷ್ಟಿದ್ದು, ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (ಎನ್‌ಎಸ್‌ಸಿ) ಸಚಿವಾಲಯ ಅಂದಾಜಿಸಿದ್ದಕ್ಕಿಂತ ಶೇ 6.2 ಹೆಚ್ಚು ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಹೇಳಿದೆ.

ಎನ್‌ಎಸ್‌ಸಿ ಅಂಕಿಅಂಶಗಳ ಪ್ರಕಾರ ದೇಶದ ಸರಾಸರಿ ಜಿಡಿಪಿ ಶೇ 8.2 ಆಗಿದ್ದು, ಜಿಡಿಪಿಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ರಾಜ್ಯ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಸಚಿವಾಲಯದ ಪ್ರಕಟಣೆ ವಿವರಿಸಿದೆ. 

ADVERTISEMENT

ಪ್ರಕಟಣೆ ಹೇಳಿದ್ದೇನು?: 2023-24ನೇ ಸಾಲಿನ ಆರಂಭದಲ್ಲಿ ಕರ್ನಾಟಕದ ಜಿಡಿಪಿಯನ್ನು ಶೇ 4 ಎಂದು ಅಂದಾಜಿಸಲಾಗಿತ್ತು. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಆದರೆ, ಒಟ್ಟು ಆರ್ಥಿಕತೆಯಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಹಾರ್ಡ್‌ವೇರ್‌ ವಲಯದ ಪಾಲು ಶೇ 28ಕ್ಕೆ ಹಿಗ್ಗಿತ್ತು. ಹಾಗಾಗಿ, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕಮಟ್ಟದಲ್ಲಿ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕದ ಪ್ರಗತಿ ಏರುಗತಿಯಲ್ಲಿ ಸಾಗಿತ್ತು.

ಭಾರತದ ಐಟಿ ವಲಯ 2022ರ ಹಣಕಾಸು ಸಾಲಿನಲ್ಲಿ ಶೇ 15.5ರಷ್ಟು ಪ್ರಗತಿ ಕಂಡಿದ್ದು, 2023ರ ಅವಧಿಯಲ್ಲಿ ಶೇ 8ಕ್ಕೆ ಕುಸಿತ ಅನುಭವಿಸಿದರೂ, ಉತ್ತಮ ಆಡಳಿತ ಮತ್ತು ಬಹುವಲಯಗಳ ಅಭಿವೃದ್ಧಿಯಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಸ್ಥಿರತೆ ಸಾಧಿಸಿದೆ.

2024-25ನೇ ಹಣಕಾಸು ಸಾಲಿಗೆ ಎನ್‌ಎಸ್‌ಸಿ ಕರ್ನಾಟಕ ರಾಜ್ಯಕ್ಕೆ ಶೇ 9.4 ಜಿಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ, ಹಣಕಾಸು ಸಚಿವಾಲಯ ಕರ್ನಾಟಕದ ಜಿಡಿಪಿ ದರವನ್ನು ಶೇ 14ರಷ್ಟು ಅಂದಾಜಿಸಿದೆ. 2024ರ ಸೆಪ್ಟೆಂಬರ್‌ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ 10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ 24ರಷ್ಟು ಹೆಚ್ಚಳ ದಾಖಲಿಸಿದೆ.

ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲ ವರ್ಗಗಳಿಗೂ ತಲುಪುವುದನ್ನು ಖಾತ್ರಿ ಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ, ಬಂಡವಾಳ ಆಕರ್ಷಿಸುವ ಕರ್ನಾಟಕದ ಆರ್ಥಿಕ ಮಾದರಿ ಈ ಯಶಸ್ಸಿಗೆ ಕಾರಣ. ದೇಶದ ಡಿಜಿಟಲ್‌ ಮತ್ತು ಆರ್ಥಿಕ ರಂಗದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಉದ್ಯಮ ರಂಗದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.