ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ. ಡಿ.15ರಂದು ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಗ್ರಾಮಸ್ಥರು ಮತ್ತು ಪರಿಸರವಾದಿಗಳುಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಹೊಸ ಘಟಕಗಳ ಸ್ಥಾಪನೆ ಸಂಬಂಧ ಭಾರತೀಯ ಅಣುವಿದ್ಯುತ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸಿ.ಪಾಠಕ್ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಮೇ 24ರಂದು ನಡೆದ ಕೇಂದ್ರ ಸರ್ಕಾರದ ಹಣಕಾಸು ಸಲಹಾ ಸಮಿತಿಯ (ಇಎಸಿ) ಸಭೆಯಲ್ಲಿ ಇದಕ್ಕೆ 17 ನಿರ್ದಿಷ್ಟ ಮತ್ತು 19 ಸಾಮಾನ್ಯ ಷರತ್ತುಗಳನ್ನು ವಿಧಿಸಿ ಹಸಿರು ನಿಶಾನೆ ನೀಡಲಾಗಿದೆ. ಈ ಸಂಬಂಧ ಸಚಿವಾಲಯದ ಪರಿಸರ ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ.ಶ್ರುತಿ ರೈ ಭಾರದ್ವಾಜ್, ಸೆ.5ರಂದುಪಾಠಕ್ ಅವರಿಗೆ ಪತ್ರ ಬರೆದಿದ್ದಾರೆ.
ಹೊಸ ಘಟಕಗಳು ಉತ್ಪಾದಿಸುವ ಒಟ್ಟು ವಿದ್ಯುತ್‌ನಲ್ಲಿ ಅರ್ಧದಷ್ಟನ್ನು ರಾಜ್ಯಕ್ಕೆ ನೀಡಬೇಕಾಗುತ್ತದೆ.
‘ಈ ಯೋಜನೆಜಾರಿಯಾದರೆತಮ್ಮ ಗ್ರಾಮಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಹಾಗಾಗಿ ಬಹುಪಾಲು ಜನರು ಇದರ ಪರವಾಗಿದ್ದಾರೆ. ಆದರೆ, ಕೆಲವರು ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ, ಕೃಷಿ ಉತ್ಪಾದನೆಯಲ್ಲಿ ಕುಂಠಿತ ಹಾಗೂ ವಾಹನ ದಟ್ಟಣೆ ಹೆಚ್ಚಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ ಎಂಬ ವಿಚಾರವನ್ನು ಸಮಿತಿ ಗಮನಿಸಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
‘ಯೋಜನೆ ಸಲುವಾಗಿ ಸುಮಾರು 8,700 ಮರಗಳನ್ನು ಕಡಿಯಬೇಕಾಗುತ್ತದೆ. ಒಟ್ಟಾರೆ 120 ಹೆಕ್ಟೇರ್ ಪ್ರದೇಶದಲ್ಲಿ ಮರಗಳನ್ನು ತೆರವು ಮಾಡುತ್ತಿದ್ದು, ಇದಕ್ಕೆಪ್ರತಿಯಾಗಿ ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 732 ಹೆಕ್ಟೇರ್ ಅರಣ್ಯ ಅಭಿವೃದ್ಧಿ ಮಾಡಬೇಕು’ ಎಂದು ಸಮಿತಿ ತಿಳಿಸಿದೆ.
‘ವರದಿ ತಿರುಚಿರುವ ಅನುಮಾನ’
‘ಕೇಂದ್ರ ಪರಿಸರ ಸಚಿವಾಲಯವು ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ. ಬಹುಪಾಲು ಜನರು ಹೊಸ ಘಟಕಗಳ ಸ್ಥಾಪನೆಯನ್ನು ವಿರೋಧಿಸಿದ್ದರು, ಪ್ರತಿಭಟನೆಯನ್ನೂ ಮಾಡಿದ್ದರು.ಮರಗಳನ್ನು ಕಡಿಯುವ ಬಗ್ಗೆ ಅಂದು ಸಭೆಯಲ್ಲಿ ಪ್ರಸ್ತಾಪಿಸಿರಲಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡಿದ ವರದಿಯನ್ನು ಕೇಂದ್ರದಲ್ಲಿ ತಿರುಚಿರುವ ಅನುಮಾನವಿದೆ’ ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.