ಗಾಳಿ, ನೀರು, ಮಣ್ಣು ಸಂರಕ್ಷಣೆ ಸರ್ಕಾರದ ಪ್ರಾಥಮಿಕ ಜವಾಬ್ದಾರಿ. ರಸ್ತೆ, ಸೇತುವೆ, ಆಸ್ಪತ್ರೆ, ವಿಮಾನ ನಿಲ್ದಾಣಗಳನ್ನು ಯಾರು ಬೇಕಾದರೂ ನಿರ್ಮಾಣ ಮಾಡಬಹುದು. ಇದು ನಂತರದ ಕೆಲಸ. ಗಾಳಿ, ನೀರು, ಮಣ್ಣು ರಕ್ಷಣೆ ಮೂಲ ಕೆಲಸ. ಇದಕ್ಕೆ ಸರ್ಕಾರ ಮೊದಲು ಒತ್ತು ಕೊಡಬೇಕು.
ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ಯೋಜನೆ ಕೀಲಿ ಕೈ ಸರ್ಕಾರದ ಬಳಿಯೇ ಇದೆ. ಕೆ.ಸಿ ವ್ಯಾಲಿ ನೀರು ಹರಿಯುವ ಕೋಲಾರ ಸಮೀಪದ ಲಕ್ಷ್ಮಿಸಾಗರಕ್ಕೆ ಭೇಟಿ ಕೊಟ್ಟಿದೆ. ಅಲ್ಲಿನ ಬಾವಿಗಳಲ್ಲಿ ವಿಷ ತುಂಬಿಕೊಂಡಿದೆ. ಆ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯೂ ಭೇಟಿ ನೀಡಿದ್ದರು. ಯೋಜನೆ ವಿರುದ್ಧ ಸ್ಥಳೀಯರು, ಹೋರಾಟಗಾರರು ತಂದ ತಡೆಯಾಜ್ಞೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ‘ತಡೆಯಾಜ್ಞೆ ಇನ್ನೂ ಕೈ ಸೇರಿಲ್ಲ’ ಎಂದು ಹಾರಿಕೆ ಉತ್ತರ ಕೊಟ್ಟರು.
ಭೂಮಿ ಪದರಗಳಲ್ಲಿ ಹುದುಗಿರುವ ನೀರು ಪತ್ತೆ ಹಚ್ಚಲು ತಂತ್ರಜ್ಞಾನವಿದೆ. ನೀರು ಶುದ್ಧೀಕರಿಸಲು ತಂತ್ರಜ್ಞಾನ ಇಲ್ಲ ಅಂದರೆ ಹೇಗೆ? ಬೆಂಗಳೂರು ವೃಷಭಾವತಿ ನದಿ ನೀರು ಕಲುಷಿತ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ (ಎನ್‌ಜಿಟಿ) ದೂರು ಕೊಟ್ಟಾಗ ಪರಿಶೀಲನೆಗಾಗಿ ಅಧಿಕಾರಿಗಳು ಭೇಟಿ ನೀಡಿದರು. ದೂರು ನೀಡಿದ್ದ ನಮ್ಮನ್ನೇ ಈ ವೇಳೆ ಅಧಿಕಾರಿಗಳ ತಂಡವನ್ನು ಭೇಟಿಯಾಗದಂತೆ ತಡೆಯಲಾಯಿತು. ನೈಜ ಸಮಸ್ಯೆಯನ್ನು ಅಧಿಕಾರಿಗಳಿಂದ ಮರೆಮಾಚಲಾಯಿತು. ಭೂಮಿ, ನೀರು, ಮಣ್ಣು ವಿಷಕಾರಿಯಾಗುವಲ್ಲಿ ಮಾಫಿಯಾ ಕೈವಾಡವಿದೆ. ಸರ್ಕಾರ ಮಾಫಿಯಾವನ್ನು ನಿಯಂತ್ರಿಸದಿದ್ದರೆ ಭವಿಷ್ಯದ ಪೀಳಿಗೆ ನರಳಬೇಕಾಗುತ್ತದೆ.
ಬೆಂಗಳೂರಿನ ಆರ್ಕಾವತಿ, ವೃಷಭಾವತಿ ನದಿಗಳು ಹಾಳಾಗಿವೆ. ದುಡ್ಡಿನಿಂದ ಆರೋಗ್ಯ ಖರೀದಿಸಲು ಸಾಧ್ಯವೇ? ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್‌ಗಳನ್ನು ಪ್ರಶ್ನಿಸಿದರೆ ‘ಸರ್ಕಾರ ನೀರು ಹರಿಸಲು ಹೇಳಿದೆ. ಅದನ್ನು ಮಾಡುತ್ತಿದ್ದೇವೆ’ ಎನ್ನುವ ಬೇಜವಾಬ್ದಾರಿ ಉತ್ತರ ಸಿಗುತ್ತದೆ. ಯಾರಿಗೂ ಗಂಭೀರತೆ ಅರ್ಥವಾಗುತ್ತಿಲ್ಲ. ಇದೊಂದು ವಿಷ ವರ್ತುಲ. ಪರಿಸರದ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ.
ಸಂವಿಧಾನದ 21ನೇ ವಿಧಿಯು ಮನುಷ್ಯನಿಗೆ ಬದುಕುವ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಹಾಗೆಯೇ ಭೂಮಿ, ನೀರು, ಮಣ್ಣಿಗೂ ಇದು ಅನ್ವಯವಾಗಬೇಕು. ಪರಿಸರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಮತಿ ನೀಡಿರುವ ತೀರ್ಪು ಕೂಡ ಇದನ್ನೇ ಪ್ರತಿಪಾದಿಸುತ್ತದೆ. ಎನ್‌ಜಿಟಿ ಕೂಡ ಇದೇ ತೀರ್ಪು ನೀಡಿದೆ. ಆದರೆ, ಇದು ಅನುಷ್ಠಾನವಾಗುತ್ತಿಲ್ಲ!
ಜೈವಿಕ ಬಾಂಬ್ ಸ್ಫೋಟ ತಡೆಯಬೇಕಾಗಿದೆ
ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ಧೀಕರಣಗೊಳ್ಳಬೇಕಿದೆ. ಭವಿಷ್ಯದಲ್ಲಿ ಕೆಮಿಕಲ್ ಬಾಂಬ್, ಬಯೋಲಜಿಕಲ್ ಬಾಂಬ್ ಸ್ಫೋಟವನ್ನು ತಡೆಯಬೇಕಾಗಿದೆ. ಕೋರ್ಟ್ ಕೂಡ ಕಾಳಜಿ ವಹಿಸುತ್ತಿಲ್ಲ. ನೀರು ವಿಷಗೊಳಿಸಿ ಹರಿಸುವುದು ಸರಿಯಲ್ಲ. ಮೊದಲಿಗೆ ಬೆಂಗಳೂರಿನಲ್ಲಿರುವ ಮಂತ್ರಿ ಮಹೋದಯರು, ಅಧಿಕಾರಿಗಳು ಈ ನೀರು ಕುಡಿಯಲಿ!
ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ. ಆದರೆ, ತಂತ್ರಜ್ಞಾನ, ಇಚ್ಛಾಶಕ್ತಿಯ ಕೊರತೆ ಇದೆ. ಸಿಂಗಪುರದಲ್ಲಿ ಚರಂಡಿ ನೀರು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಬಳಸುವ ತಂತ್ರಜ್ಞಾನ ಇದೆ. ಇಲ್ಲಿ ಯಾಕೆ ಸಾಧ್ಯ ಆಗುತ್ತಿಲ್ಲ?
ವೃಷಭಾವತಿ ನದಿ ಒಡಲಲ್ಲಿ ಹಲವು ಕಂಪನಿಗಳು ಇವೆ. ಅವರೇ ನೀರು ಶುದ್ಧೀಕರಿಸಿ ಮರು ಬಳಕೆ ಮಾಡಿಕೊಳ್ಳಲಿ. ಕಂಪನಿಗಳಿಗೆ ಶುದ್ಧ ನೀರು ಕೊಟ್ಟು; ಹಳ್ಳಿ ಜನರಿಗೆ ಫ್ಲೋರೈಡ್‌ಯುಕ್ತ ನೀರು ಪೂರೈಕೆ ಸರಿಯೇ? ಹಳ್ಳಿಗಳಲ್ಲಿರುವ ಜನರು, ಪ್ರಾಣಿ, ಪಕ್ಷಿ ಹೇಗಾದರೂ ಸಾಯಲಿ ಎನ್ನುವ ಧೋರಣೆ ಸರ್ಕಾರದ್ದು. ಸರ್ಕಾರವೇ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ. ಜನರು ಎಚ್ಚೆತ್ತುಕೊಂಡು ಮುಖವಾಡ ಕಳಚಬೇಕಾಗಿದೆ.
ಲೇಖಕರು: ನಿವೃತ್ತ ಅರಣ್ಯ ಅಧಿಕಾರಿ, ಪರಿಸರ ತಜ್ಞ
ನಿರೂಪಣೆ: ಸುಬ್ರಮಣ್ಯ ಎಚ್.ಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.