ನವದಹೆಲಿ: ದೇಶದ ದಕ್ಷಿಣ ಹಾಗೂ ಪಶ್ಚಿಮ ಭಾಗಗಳಲ್ಲಿ ಪ್ರವಾಹದಿಂದ ಹಲವು ಹೆದ್ದಾರಿಗಳು ಸಂಪರ್ಕ ಕಡಿದುಕೊಂಡಿವೆ. ಸಂತ್ರಸ್ತರ ರಕ್ಷಣಾ ಕಾರ್ಯ ಭಾನುವಾರವೂ ಸಮರೋಪಾದಿಯಲ್ಲಿ ನಡೆಯಿತು. ಗುಜರಾತ್ ಹೊರತುಪಡಿಸಿದರೆ, ಉಳಿದೆಡೆ ಮಳೆ ಕೊಂಚ ಕಡಿಮೆಯಾಗಿದೆ.
ಭುಜದ ಮೇಲೆ ಹೊತ್ತು ಮಕ್ಕಳನ್ನು ರಕ್ಷಿಸಿದ ಕಾನ್‌ಸ್ಟೆಬಲ್
ಮೊಣಕಾಲುದ್ದ ನೀರಿನಲ್ಲೇ ಭುಜದ ಮೇಲೆ ಇಬ್ಬರು ಮಕ್ಕಳನ್ನು ಹೊತ್ತು ದಡಕ್ಕೆ ಸಾಗುತ್ತಿರುವ ಕಾನ್‌ಸ್ಟೆಬಲ್ ವಿಡಿಯೊ ಸಾಕಷ್ಟು ಪ್ರಶಂಸೆ ಪಡೆದಿದೆ. ಕಾನ್‌ಸ್ಟೆಬಲ್ ಪೃಥ್ವಿರಾಜ ಸಿನ್ಹಾ ಜಡೇಜಾ ಅವರು ಗುಜರಾತಿನ ಮೊರ್ಬಿ ಜಿಲ್ಲೆಯ ಕಲ್ಯಾಣಪುರ ಗ್ರಾಮದಲ್ಲಿ ತೋರಿದ ಧೈರ್ಯವನ್ನು ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಶ್ಲಾಘಿಸಿದ್ದಾರೆ.
(ವಿಡಿಯೊ ಸುದ್ದಿ ವಿವರ: https://bit.ly/2GZVYnE)
17 ಮಕ್ಕಳು ಸೇರಿ 42 ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಮಾಹಿತಿ ಇತ್ತು. ವಿಳಂಬ ಮಾಡದ ಅವರು ಮಕ್ಕಳನ್ನು ಹೊತ್ತು 800 ಮೀಟರ್ ದೂರ ನೀರಿನಲ್ಲೇ ನಡೆದು ದಡ ಸೇರಿಸಿದರು. ಬಳಿಕ ದೋಣಿ ಸಜ್ಜುಗೊಳಿಸಿ ಉಳಿದವರನ್ನು ರಕ್ಷಿಸಲಾಯಿತು.
ಎಲ್ಲೆಲ್ಲೂ ಮಣ್ಣಿನ ದಿಬ್ಬಗಳೇ!
ಕೇರಳದ ಕವಳಪ್ಪಾರ ಮತ್ತು ಪುತ್ತುಮಲ ಗ್ರಾಮಗಳಲ್ಲಿ ಎಲ್ಲಿ ನೋಡಿದರೂ ಮಣ್ಣಿನ ದಿಬ್ಬಗಳು, ಬುಡುಮೇಲಾದ ಅಡಿಕೆ, ರಬ್ಬರ್ ಮರಗಳೇ ಕಾಣಸಿಗುತ್ತವೆ. ಕಳೆದ ನಾಲ್ಕು ದಿನಗಳಲ್ಲಿ ಇಡೀ ಗ್ರಾಮವೇ ಭೂಕುಸಿತಕ್ಕೆ ಒಳಗಾಗಿದ್ದು, ಜನರು ಜೀವಂತವಾಗಿ ದಿಬ್ಬಗಳಡಿ ಸಿಲುಕಿದ್ದಾರೆ.
ಆಗಸ್ಟ್ 8ರಂದು ನಡೆದಿದ್ದ ಭೂಕುಸಿತದಲ್ಲಿ 35 ಮನೆಗಳು ಹಾಗೂ 65 ಜನರು ಅವಶೇಷಗಳಡಿ ಸಿಕ್ಕಿಕೊಂಡಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಬದುಕುಳಿದವರಿಗಾಗಿ ಸೇನೆಯ 250 ಸಿಬ್ಬಂದಿ ಭಾನುವಾರ ಶೋಧ ಕಾರ್ಯಾಚರಣೆ ನಡೆಸಿದರು.
ಗುಜರಾತಿನ ಕೆಲವು ಭಾಗಗಳಲ್ಲಿ ಭಾನುವಾರ ಮಳೆ ಜೋರಾಗಿತ್ತು. 24 ಗಂಟೆಗಳಲ್ಲಿ ಸೌರಾಷ್ಟ್ರದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 12 ಮಂದಿ ಮೃತಪಟ್ಟಿದ್ದಾರೆ.
*ಪೋರಬಂದರ್ ತೀರದಲ್ಲಿ ದೋಣಿ ಮುಳುಗಿ 5 ಮೀನುಗಾರರ ಸಾವು
*ದಡ ಸೇರಿದ 20 ಮೀನುಗಾರರು, ಇನ್ನೂ 3 ದೋಣಿ ನಾಪತ್ತೆ
*ಸುರೇಂದ್ರನಗರ ಜಿಲ್ಲೆಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಫಲ್ಕು ನದಿ ಸೆಳೆತಕ್ಕೆ ಕೊಚ್ಚಿಹೋದ 13 ಮಂದಿ; 6 ಮೃತದೇಹ ಪತ್ತೆ
ಕೇರಳದ ಉತ್ತರ ಜಿಲ್ಲೆಗಳಲ್ಲಿ ಭಾನುವಾರ ಮಳೆ ಪ್ರಮಾಣ ತಗ್ಗಿದೆ. ದಕ್ಷಿಣ ಹಾಗೂ ಕೇಂದ್ರ ಭಾಗದ ಆಲಪ್ಪುಳ, ಕೊಟ್ಟಾಯಂ ಜಿಲ್ಲೆಗಳಲ್ಲಿ ಪ್ರವಾಹ ಕಡಿಮೆಯಾಗಿದೆ.
*ಕುಟ್ಟನಾಡಿನಲ್ಲಿ 200 ಎಕರೆ ಭತ್ತದ ಪೈರು ನಾಶ–ಸ್ಥಳೀಯರ ಮಾಹಿತಿ
*ಕಾಸರಗೋಡಿನ ತೇಜಸ್ವಿನಿ ನದಿಯ ಪ್ರವಾಹ ಇಳಿಮುಖ; ಪರಿಹಾರ ಕೇಂದ್ರಗಳಿಗೆ ತೆರಳಿದ್ದ ನೀಲೇಶ್ವರ, ಹೊಸದುರ್ಗದ ಕುಟುಂಬಗಳು ತಮ್ಮ ಮನೆಗಳಿಗೆ ವಾಪಸ್
*ಕಾಞಂಗಾಡ್ ಸಮೀಪದ ಅನಕಲ್ಲುವಿನಲ್ಲಿ ಮನೆಯ ಮೇಲೆ ಗುಡ್ಡಕುಸಿದಿದ್ದು, ಕುಟುಂಬದ ಮೂವರು ಸದಸ್ಯರು ಪವಾಡದ ರೀತಿ ಪಾರಾಗಿದ್ದಾರೆ.
*1,556 ಪರಿಹಾರ ಕೇಂದ್ರಗಳಲ್ಲಿ 2.3 ಲಕ್ಷ ಜನರಿಗೆ ಆಶ್ರಯ
*ಭೂಕುಸಿತದಿಂದ ವಯನಾಡ್, ಮಲಪ್ಪುರ, ಕೋಯಿಕ್ಕೋಡ್‌ನ ರಸ್ತೆಗಳಿಗೆ ಹಾನಿ
*ಸ್ಥಗಿತಗೊಂಡಿದ್ದ ಕೊಚ್ಚಿ ವಿಮಾನ ನಿಲ್ದಾಣ ಭಾನುವಾರ ಬೆಳಿಗ್ಗೆಯಿಂದ ಕಾರ್ಯಾರಂಭ
*ಕಣ್ಣೂರು, ಕಾಸರಗೋಡು, ವಯನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
*ಮಂಗಳೂರು–ತಿರುವನಂತಪುರ, ಬೆಂಗಳೂರು–ಎರ್ನಾಕುಲಂ ರೈಲುಗಳ ಸಂಚಾರ ರದ್ದು
ಗುರುವಾರ ಸಾಂಗ್ಲಿಯಲ್ಲಿ ದೋಣಿ ಮುಳುಗಿ ಮೃತಪಟ್ಟಿದ್ದ 17 ಜನರ ಶವಗಳನ್ನು ಹೊರತೆಗೆಯಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ನಾಸಿಕ್, ಠಾಣೆ, ಪುಣೆ, ಪಾಲ್ಘಾರ್, ರತ್ನಗಿರಿ, ರಾಯಗಡ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆಯಾಗಿದೆ.
*ರಸ್ತೆ ಸಂಪರ್ಕ ಸಾಧ್ಯವಾಗದ ಕಾರಣ ಕೊಲ್ಲಾಪುರಲ್ಲಿ ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣ ವಿತರಣೆ
*ಸಾಂಗ್ಲಿ, ಕೊಲ್ಲಾಪುರಕ್ಕೆ 100 ವೈದ್ಯರ ತಂಡ ಸದ್ಯದಲ್ಲೇ ರವಾನೆ
*ಈ ಎರಡೂ ಜಿಲ್ಲೆಗಳಲ್ಲಿ ಹಾನಿಗೊಳಗಾದ ವಿದ್ಯುತ್ ಮೀಟರ್‌ಗಳನ್ನು ಉಚಿತವಾಗಿ ಬದಲಿಸಿಕೊಡಲು ವಿದ್ಯುತ್ ಪೂರೈಕೆ ಸಂಸ್ಥೆ ನಿರ್ಧಾರ
*ಪ್ರವಾಹ ಸ್ಥಿತಿ ತಗ್ಗಿಸಲು ಆಲಮಟ್ಟಿ ಡ್ಯಾಂನಿಂದ 2.3 ಕ್ಯೂಸೆಕ್ ನೀರು ಹೊರಕ್ಕೆ
*ಕೊಯ್ನಾ ಜಲಾಶಯದಿಂದ 53 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ. ಜಲಾನಯನ ಪ್ರದೇಶದಲ್ಲಿ ಮುಂದುವರಿದ ಮಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.