ಮೈಸೂರು: ‘1992ರ ಡಿ.6. ಮಧ್ಯಾಹ್ನ 12.30ರ ಆಸುಪಾಸು. ಅಪಾರ ಸಂಖ್ಯೆಯಲ್ಲಿದ್ದ ಕರಸೇವಕರು ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿ ಯಲ್ಲಿ ಬಾಬರ್ ನಿರ್ಮಿಸಿದ್ದ ಕಟ್ಟಡ ಕೆಡವಲು ಮುಂದಾದರು. ಪೇಜಾವರ ಮಠಾಧೀಶ ವಿಶ್ವೇಶತೀರ್ಥರು ತಕ್ಷಣವೇ ಕಟ್ಟಡದೊಳಗೆ ಹೋಗಿ, ಅಲ್ಲಿದ್ದ ರಾಮ ಲಲ್ಲಾನ (ಬಾಲಕ ರಾಮ) ವಿಗ್ರಹವನ್ನು ಹೊರಗೆ ತಂದರು...’
‘ಕಟ್ಟಡದ ಸಮೀಪದಲ್ಲೇ ಇದ್ದ ಮರವೊಂದರ ಕೆಳಗೆ ವಿಗ್ರಹವನ್ನಿಟ್ಟುಕೊಂಡು ಕೂತರು. ಪೇಜಾವರರಿಗೆ ಅದಮಾರು, ಶಿರೂರಿನ ಮಠಾಧೀಶರು ಸಾಥ್ ನೀಡಿದರು. ಪರ್ಯಾಯ ಮಠಗಳ ಮೂರು ಉಪ ಮಠಗಳ ಸ್ವಾಮೀಜಿಗಳು ಅಲ್ಲಿದ್ದರು. ಇವರ ಸೇವೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಾನು ನೇಮಕ ಗೊಂಡಿದ್ದೆ...’
-ಅಯೋಧ್ಯೆಯಲ್ಲಿ ನಡೆದ ಮಸೀದಿ ನೆಲಸಮದ ಕರಸೇವೆಯಲ್ಲಿ ಭಾಗಿಯಾಗಿದ್ದ ಉಡುಪಿ ಮೂಲದ ಮೈಸೂರಿನಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ರವಿಚಂದ್ರ ಬಲ್ಲಾಳ್ ಮಂಗಳವಾರ ‘ಪ್ರಜಾವಾಣಿ’ ಜೊತೆ, ಆ ದಿನದ ಘಟನಾವಳಿಗಳನ್ನು ಎಳೆಎಳೆಯಾಗಿ ಹಂಚಿಕೊಂಡರು.
‘ಸಂಜೆ 4.30ರಿಂದ 5 ಗಂಟೆಯೊಳಗೆ ಕಟ್ಟಡ ನೆಲಸಮವಾಯಿತು. ತಕ್ಷಣವೇ ಪೇಜಾವರರು ತಮ್ಮ ಬಳಿಯಿದ್ದ ರಾಮ ಲಲ್ಲಾನ ವಿಗ್ರಹವನ್ನು ಮತ್ತೆ ಮೂಲ ಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಿ ದರು. ಇದರ ಬೆನ್ನಿಗೆ ಕಟ್ಟಡ ಕಟ್ಟುವ ಕರಸೇವೆಗೂ ಚಾಲನೆ ನೀಡಿದರು.
ವಿಶ್ವೇಶತೀರ್ಥರ ಜೊತೆಗೆ ಉಡುಪಿ ಯಿಂದ ಬಂದಿದ್ದ ಸ್ವಾಮೀಜಿಗಳು ಸಹ ಕರಸೇವೆ ನಡೆಸಿದರು. ಇದನ್ನು
ಕಣ್ತುಂಬಿಕೊಳ್ಳುವ ಭಾಗ್ಯ ನನ್ನದಾಗಿತ್ತು’ ಎಂದರು.
‘ಪೇಜಾವರರು ಪ್ರತಿಷ್ಠಾಪಿಸಿದ ರಾಮಲಲ್ಲಾ ವಿಗ್ರಹದ ಸುತ್ತಲೂ ಐದು ಅಡಿ ಎತ್ತರದ ಇಟ್ಟಿಗೆಯ ಗೋಡೆಯನ್ನು ಆಗಲೇ ನಿರ್ಮಿಸಲಾಯಿತು. ಇದರ ಸುತ್ತಲೂ 10 ಅಡಿ ಎತ್ತರದ ಮರದ ನಾಲ್ಕು ಕಂಬ ನೆಟ್ಟು ಟಾರ್ಪಲ್ ಹೊದಿಸಲಾಯಿತು’ ಎಂದರು.
‘ಆಗಿನ ಪ್ರಧಾನಿ ನರಸಿಂಹರಾವ್ ಅದೇ ಜಾಗದಲ್ಲಿ ಮಸೀದಿ ನಿರ್ಮಿ ಸುವುದಾಗಿ ಹೇಳಿದ್ದಾರೆ ಎಂಬ ಹೇಳಿಕೆ ಪೇಜಾವರರ ಕಿವಿಗೆ ಬಿದ್ದಿತು. ತಕ್ಷಣವೇ ಫೋನಾಯಿಸಿದರು. ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಶಾರದಾ ಪ್ರಸಾದ್ ಕರೆ ಸ್ವೀಕರಿಸಿದರು. ವಿಶ್ವೇಶತೀರ್ಥರು ‘ದೇವರ ಸಂಕಲ್ಪವಿತ್ತು. ಕಟ್ಟಡ ಉರುಳಿತು. ಮತ್ತೆ ಮಸೀದಿ ಕಟ್ಟುವ ಮಾತು ಬೇಡ. ಪ್ರಧಾನಿ ಅವರಿಗೆ ನಮ್ಮ ಈ ಮಾತನ್ನು ತಿಳಿಸಿ ಎಂದು ಹೇಳಿದರು’ ಎಂಬುದನ್ನು ಆರ್‌ಎಸ್‌ಎಸ್ ಸ್ವಯಂ ಸೇವಕರೂ ಆಗಿರುವ ಬಲ್ಲಾಳ್ ಸ್ಮರಿಸಿಕೊಂಡರು.
*ಅಯೋಧ್ಯೆಯಲ್ಲಿ ಕರಸೇವೆ ಯಶಸ್ವಿಗೊಳ್ಳಲು ಕಲ್ಯಾಣ್ ಸಿಂಗ್ ಪ್ರಮುಖರು. ಮುಖ್ಯಮಂತ್ರಿ ಹುದ್ದೆಗೆ ಕಂಟಕವಾಗಲಿದೆ ಎಂಬುದು ಗೊತ್ತಿದ್ದರೂ, ಕರಸೇವಕರನ್ನು ಕಾಪಾಡಿದರು. ಶಿಲಾನ್ಯಾಸಕ್ಕೆ ಆಹ್ವಾನ ನೀಡಬೇಕಿತ್ತು
-ರವಿಚಂದ್ರ ಬಲ್ಲಾಳ್, ಕರಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.