ಬೆಂಗಳೂರು: ಕೆಎಎಸ್ 40 ಹುದ್ದೆಗಳೂ ಸೇರಿ ಗೆಜೆಟೆಡ್ ಪ್ರೊಬೇಷನರಿ ಒಟ್ಟು 384 ಹುದ್ದೆಗಳಿಗೆ ಇದೇ 27ರಂದು ನಿಗದಿಯಾಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕೆಂಬ ಒತ್ತಾಯದ ನಡುವೆಯೂ ಅದೇ ದಿನ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ.
ಕೆಪಿಎಸ್‌ಸಿ ನಡೆಯನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೊರೆ ಹೋಗಿದ್ದಾರೆ.
15ರಿಂದ ಪ್ರವೇಶಪತ್ರ: ‘ಪೂರ್ವಭಾವಿ ಪರೀಕ್ಷೆಯನ್ನು ಇದೇ 25ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಂದು ಐಬಿಪಿಎಸ್ ಪರೀಕ್ಷೆ ನಿಗದಿ ಆಗಿರುವುದರಿಂದ, ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಲ್ಪ ಅವಧಿಗೆ ಮುಂದೂಡಲು ತೀರ್ಮಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೇ 15ರ ನಂತರ ಪ್ರವೇಶಪತ್ರವನ್ನು ಆಯೋಗದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
‘ಆಗಸ್ಟ್ 27 ಕೆಲಸ ದಿನ ಆಗಿರುವುದರಿಂದ ಈಗಾಗಲೇ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ಎಲ್ಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಿಗೆ ವಿಶೇಷ ಸಾರ್ವತ್ರಿಕ ರಜೆ, ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರದ ಸೇವಾನಿರತ ಅಭ್ಯರ್ಥಿಗಳಿಗೆ ವಿಶೇಷ ರಜೆ ಘೋಷಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.
ಪರೀಕ್ಷೆ ಮುಂದೂಡುವಂತೆ ಪಟ್ಟು: ‘ಆಗಸ್ಟ್ 27ರಂದು ಸರ್ಕಾರದ ಸೇವಾನಿರತರಿಗೆ ಸಾಂದರ್ಭಿಕ ರಜೆ ನೀಡಿದರೂ, ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಪರೀಕ್ಷೆಯನ್ನು ಮುಂದೂಡಲೇಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಕೆಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ.
‘ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡಿರುವುದಾಗಿ ಕೆಪಿಎಸ್‌ಸಿ ನೀಡಿದ್ದ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಪರೀಕ್ಷೆ ನಡೆಯುವ ದಿನಕ್ಕಿಂತ ಒಂದು ವಾರದ ಮೊದಲು ಪ್ರಶ್ನೆ ಪತ್ರಿಕೆ ಮುದ್ರಿಸಬೇಕೆಂಬ ನಿಯಮವಿದೆ. ಆದರೆ, ಕೆಪಿಎಸ್‌ಸಿ ಒಂದು ತಿಂಗಳ ಮೊದಲೇ ಪ್ರಶ್ನೆಪತ್ರಿಕೆ ಮುದ್ರಿಸಿರುವುದರ ಹಿಂದಿನ ಉದ್ದೇಶವೇನು’ ಎಂದೂ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.
ಕೆಪಿಎಸ್‌ಸಿ ನಡೆ ಸರಿಯಲ್ಲ: ಸುದ್ದಿಗಾರರ ಜೊತೆ ಮಾಜಿ ಶಾಸಕ ವೈಎಸ್‌ವಿ ದತ್ತ, ‘ಒಂದು ತಿಂಗಳ ಅವಧಿಗೆ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಮನವಿ ಮಾಡಿದರೂ ಕೇಳಿಸಿಕೊಳ್ಳಲು ಕೆಪಿಎಸ್‌ಸಿ ತಯಾರಿಲ್ಲ. ಈ ನಡೆ ಸರಿಯಲ್ಲ’ ಎಂದರು.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ‘ಪರೀಕ್ಷೆ ಮುಂದೂಡಲೇಬೇಕು’ ಎಂದು ತಮ್ಮ ‘X’ ಖಾತೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.