ಬೆಂಗಳೂರು: ಕೈಯಲ್ಲಿಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆಯನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಿರ್ಮಿಸಿದ್ದು,ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ. 1ರಂದು ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಲಾಗುತ್ತದೆ.
ಬೆಂಗಳೂರಿನ ಸ್ಥಪತಿ ಕ್ರಿಯೇಷನ್ಸ್‌ನ ಕಲಾವಿದ ಶಿವದತ್ತ ಅವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆ ಆರು ಕಾಲು ಅಡಿ ಎತ್ತರವಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ.ಪರಿಷತ್ತಿನ ತಡೆಗೋಡೆಗಳ ಒಳಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರ ಪ್ರತಿಮೆಗಳನ್ನು ಸ್ಥಾಪಿಸಲೂ ಕಾರ್ಯಯೋಜನೆ ರೂಪಿಸಲಾಗಿದೆ.
‘ಚತುರ್ಭುಜ, ಪದ್ಮಪೀಠಾಸೀನ, ಪಾಶಾಂಕುಶ, ಅಭಯ ವರದ ಮುದ್ರೆಯೊಂದಿಗೆ ಕನ್ನಡ ಧ್ವಜ ಹಿಡಿದಿರುವ ಭುವನೇಶ್ವರಿ ಪ್ರತಿಮೆ ನಿರ್ಮಿಸುವಂತೆ ತಿಳಿಸಲಾಗಿತ್ತು. ಅದೇ ಪ್ರಕಾರ ನಿರ್ಮಿಸಲಾಗಿದೆ. ಇದಕ್ಕೆ ₹ 4 ಲಕ್ಷ ವೆಚ್ಚವಾಗಿದೆ.ಭುವನೇಶ್ವರಿ ಪ್ರತಿಮೆ ಅನಾವರಣಕ್ಕೆ ರಾಜ್ಯಪಾಲರನ್ನು ಆಹ್ವಾನಿಸುವ ಯೋಚನೆಯಿದೆ. ಕನ್ನಡ ಪರ ಹೋರಾಟಗಾರರಿಗೂ ಆಹ್ವಾನ ನೀಡಲಾಗುವುದು’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.
‘ಪರಿಷತ್ತಿನ ತಡೆಗೋಡೆಗಳ ಮೇಲೆ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗುವುದು.ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಇಬ್ಬರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು ಉಬ್ಬು ಚಿತ್ರದಲ್ಲಿ ಮೂಡಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.