ADVERTISEMENT

ಸಾಹಿತ್ಯ ಪರಿಷತ್‌ಗೆ ‘ಕನ್ನಡ ಕಟ್ಟುವ’ ನಾಯಕ ಬರಲಿ: ವೇಣು ಶರ್ಮ

ವೇಣು ಶರ್ಮ
Published 12 ಏಪ್ರಿಲ್ 2021, 8:30 IST
Last Updated 12 ಏಪ್ರಿಲ್ 2021, 8:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂಗ್ಲಿಷ್ ಭಾಷೆಯಲ್ಲೇ ಓದಿ-ಬೆಳೆದ, ಜಗತ್ತಿನಾದ್ಯಂತ ಕನ್ನಡವನ್ನು ಹೆತ್ತ ತಾಯಿಯಂತೆ ಪ್ರೀತಿಸುವ ವರ್ಗ ಇನ್ನೂ ಉಳಿದಿದೆ. ಈ ವರ್ಗವನ್ನೂ ಡಿಜಿಟಲ್ ಕ್ರಾಂತಿಯ ನಡುವೆ ನಮ್ಮೊಟ್ಟಿಗೆ ಸೇರಿಸಿ ಕನ್ನಡ ಕಟ್ಟಬೇಕಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆ ಹತ್ತಿರ ಬರುತ್ತಿರುವಾಗ ಇಂಥದ್ದೊಂದಿಷ್ಟು ಚಿಂತನೆಗೆ ಸಕಾಲ. ಪರಿಷತ್‌ ತನ್ನ ಸಾಂಸ್ಥಿಕ ರಚನೆಯಲ್ಲಿ ತನ್ನ ಹಳೇ ಸಂಪ್ರದಾಯದ ಚೌಕಟ್ಟಿನಿಂದ ಹೊರ ಬಂದು ಹೊಸ ಸ್ವರೂಪ ಪಡೆದುಕೊಳ್ಳಬೇಕು.

ಒಂದು ಸಣ್ಣ ವಿಚಾರವನ್ನೇ ತೆಗೆದುಕೊಳ್ಳೋಣ. ಸಾಹಿತಿಗಳು ಮಾತ್ರ ಪರಿಷತ್‌ಗೆ ಅಧ್ಯಕ್ಷರಾಗಬೇಕೇ? ಸಾಹಿತ್ಯಾಭಿಮಾನಿಗಳೂ ಆಯ್ಕೆಯಾಗಬಹುದೇ? ‘ಸಾಹಿತಿ’ಯ ಅಭಿಮಾನಿಗಳಷ್ಟೇ ಅಧಿಪತ್ಯ ಸಾಧಿಸಬೇಕಾ? ಯುವಕರಿಗೇಕೆ ಅವಕಾಶ ಕೊಡಬಾರದು? ಹೀಗೆ ಹಲವು ಸಂದೇಹಗಳು ಕಾಡುತ್ತಿವೆ.

ADVERTISEMENT

ಈಗಿನ ಹಳೆಯ ಬೇರುಗಳು ಹೊಸ ಚಿಗುರುಗಳಿಗೊಂದಿಷ್ಟು ಅವಕಾಶ ಕೊಟ್ಟು ನೋಡಬಾರದೇಕೆ ಎಂಬುದೂ ನನ್ನ ಆಶಯ. ಒಂದು ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಬೇಕು. ಹಾಗೆಂದು ಇದುವರೆಗೆ ಈ ಸಂಸ್ಥೆಯ ನೇತೃತ್ವ ವಹಿಸಿಕೊಂಡವರ ಬಗೆಗೆ ಆಕ್ಷೇಪವೂ ಅಲ್ಲ ಅಗೌರವವೂ ಅಲ್ಲ. ನಿಮ್ಮ (ಹಿರಿಯರ) ಮಾರ್ಗದರ್ಶನದಲ್ಲಿ ಹೊಸ ತಲೆಮಾರು ಮುಂದೆ ಬರಲಿ ಎಂಬ ಆಶಯ ಅಷ್ಟೆ.

‘ಭಾಷೆ ಬೆಳೆಯುವುದು ಬಳಕೆಯಿಂದ ಹಾಗೂ ಸಾಹಿತ್ಯ ಬೆಳೆಯುವುದು ಓದುಗರಿಂದ’. ಆದರೆ, ಈ ಮಾತು ಬರೀ ವೇದಿಕೆಯ ಭಾಷಣಗಳಿಗಷ್ಟೇ ಸೀಮಿತವಾಗಿಬಿಟ್ಟಿದೆ. ಓದುಗರನ್ನು ಸೃಷ್ಟಿಮಾಡುವುದು ಪ್ರಯೋಗಕ್ಕಿಳಿಯಬೇಕು. ಸಾಂಸ್ಕೃತಿಕ, ನಾಟಕ, ಸಂಗೀತಕ್ಕೆ ಪ್ರೇಕ್ಷಕ ವರ್ಗದ ಸೃಷ್ಟಿಯೂ ಆಗಬೇಕು. ಹಿರಿಯರು ಮುಂದಿರುವ ಪರಿಷತ್‌ನಲ್ಲಿ ಯುವ ಸಾಹಿತಿಗಳನ್ನು ಸಂಘಟಕರನ್ನಾಗಿ ಪರಿವರ್ತಿಸಿ ಜವಾಬ್ದಾರಿ ಹಂಚಲಿ.

ಒಂದು ನೀಲ ನಕ್ಷೆ: ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಕನ್ನಡವನ್ನು ಕಟ್ಟುವ ಹಾಗೂ ಬೆಳೆಸುವ ಬಗ್ಗೆ ಒಂದು ಪರಿಪೂರ್ಣವಾದ ದೂರದೃಷ್ಟಿಯ ದಾಖಲೆ (ವಿಷನ್‌ ಡಾಕ್ಯುಮೆಂಟ್‌) ಆಗಬೇಕು. ಸಂಘಟನೆಗಳು, ಪರಿಷತ್ತುಗಳು, ಭಾಷಾ ಪ್ರಾಧಿಕಾರ ಹಾಗೂ ಕನ್ನಡಕ್ಕೆ ಮಿಡಿಯುವ ಮನಸ್ಸುಗಳು ಸೇರಿ ಇದನ್ನು ಮಾಡಬೇಕು.

ಆನ್‌ಲೈನ್‌ ಮಾರುಕಟ್ಟೆ: ಡಿಜಿಟಲ್ ಕಂಟೆಂಟ್‌ಗಳು ಬೆರಳ ತುದಿಯಲ್ಲೇ ಯಥೇಚ್ಛವಾಗಿ ಸಿಗುತ್ತಿದೆ. ಪುಸ್ತಕಗಳಿಗೆ ಆನ್‌ಲೈನ್ ಮಾರುಕಟ್ಟೆ ಹುಡುಕಬೇಕು. ಯುವ ಸಾಹಿತಿಗಳ ಈ ಸಂಕಷ್ಟಕ್ಕೆ ಸಾಹಿತ್ಯ ಪರಿಷತ್ತು- ಕನ್ನಡ ಸಂಘಟನೆಗಳು ಹೆಗಲು ನೀಡಬೇಕು. ಸನ್ಮಾನ-ಭಾಷಣಗಳಿಗೆ ಹೊರತಾದ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುವತ್ತ ಗಮನಹರಿಸಬೇಕು.

ಪ್ರಾದೇಶಿಕ ಭಾಷೆಗಳ ಸಮನ್ವಯ: ರಾಜ್ಯದಲ್ಲಿ ಕನ್ನಡದ ಜೊತೆಗೆ ಹಲವಾರು ಭಾಷೆಗಳು ಬಳಕೆಯಲ್ಲಿವೆ. ಉದಾಹರಣೆಗೆ ದಕ್ಷಿಣ ಕನ್ನಡ-ಉಡುಪಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡಗಿನಲ್ಲಿ ಕೊಡವ ಭಾಷೆಗಳೂ ಬಳಕೆಯಲ್ಲಿವೆ. ಇವೆಲ್ಲ ಭಾಷೆಗಳ ಜೊತೆಗೆ ಸಮನ್ವಯದಿಂದ, ಭಾಷಾ ಸಂಘರ್ಷಗಳಿಗೆ ಎಡೆಮಾಡಿಕೊಡದಂತೆ ಕನ್ನಡ ಬೆಳೆಯಬೇಕಾಗಿದೆ. ಗಡಿನಾಡು ಕಾಸರಗೋಡಿನಲ್ಲೂ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಕನ್ನಡ ಬೆಳೆಸಬೇಕು.

ಮನೋರಂಜನಾ ಮಾಧ್ಯಮಗಳನ್ನೂ ಬಳಸಿ: ಮನೋರಂಜನಾ ಮಾಧ್ಯಮಗಳ ಮೂಲಕವೂ ಕನ್ನಡ ಕಲಿಸುವ ಪ್ರಯತ್ನ ಮಾಡಬಹುದು. ಉದಾಹರಣೆಗೆ ‘ಕನ್ನಡತಿ’ ಧಾರಾವಾಹಿಯಲ್ಲಿ ಪ್ರತಿದಿನ ಒಂದೊಂದು ಕನ್ನಡ ಪದಗಳ ಬಗ್ಗೆ ವಿವರಣೆ ನಿಡಲಾಗುತ್ತಿದೆ. ಹೀಗೇ ಕನ್ನಡವನ್ನು ಪಸರಿಸುವ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು.

ಒಂದು ಭಾಷೆ, ಒಂದೇ ಆಶಯ: ರಾಜ್ಯದಲ್ಲಿ ಕನ್ನಡ ಸಂಘಟನೆಗಳು ಹಲವು ಕಾರಣಗಳಿಗಾಗಿ ಬೇರೆಬೇರೆಯಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವೆಲ್ಲ ಸಂಘಟನೆಗಳಿಗೂ ಕನ್ನಡವೇ ಸಿದ್ಧಾಂತವಾಗಿ, ಒಂದೇ ಆಶಯದೊಂದಿಗೆ ಜೊತೆಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು.

ವೈರುಧ್ಯ ಬದಲಾಗಲಿ: ಸಾಹಿತಿಗಳೇ ಬೇರೆ, ಸಂಘಟಕರೇ ಬೇರೆ. ಎರಡರ ಸಮ್ಮಿಶ್ರಣ ಆಗಬೇಕು. ಹಲವು ಸಾಹಿತ್ಯ-ಕಲೆ ಸಮಾರಂಭಗಳಲ್ಲಿ ಭಾಗವಹಿಸಿದ ಅನುಭವದಲ್ಲಿ ಹೇಳುವುದಾದರೆ ವೇದಿಕೆಯಲ್ಲಿ ಅವಕಾಶವಿದ್ದರೆ ಮಾತ್ರ ನಮ್ಮ ಹಿರಿಯರು ಸಮಾರಂಭದಲ್ಲಿ ಇರುತ್ತಾರೆ. ಇಲ್ಲದಿದ್ದಲ್ಲಿ ಅವರನ್ನು ಯಾವುದೇ ಕಾರ್ಯಕ್ರಮದಲ್ಲಿ ನಾನು ನೋಡಿಲ್ಲ. ಯುವ ಸಾಹಿತಿಗಳನ್ನು ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳಲ್ಲಿ ಕಂಡಿದ್ದೇ ವಿರಳ. ಇದು ಬದಲಾಗಬೇಕು.

ಭಾಷೆ, ಕಲೆ, ನಾಟಕ, ಪುಸ್ತಕ ಪ್ರಕಟಣೆ, ಸ್ಥಳೀಯ ಸಾಂಸ್ಕೃತಿಕ ಪರಂಪರೆ, ಮಕ್ಕಳ ಸಾಹಿತ್ಯ, ಜನಪದ, ಸಮುದಾಯವಾರು ಸಂಸ್ಕೃತಿ, ಯಕ್ಷಗಾನ, ಕನ್ನಡ ಪತ್ರಿಕೋದ್ಯಮ, ಕವಿ, ಕಾದಂಬರಿಗಾರ, ಲೇಖಕ, ವಿಮರ್ಶಕ, ಕನ್ನಡ ಶಿಕ್ಷಣ ಕ್ಷೇತ್ರ. . . ಹೀಗೇ ಎಲ್ಲರನ್ನೂ ಒಂದೆಡೆ ಸೇರಿಸಿ ‘ಕನ್ನಡ ಕಟ್ಟುವ’ ಸಾಹಿತ್ಯ ಪರಿಷತ್ ನಾಯಕನನ್ನು ಆರಿಸುವ ಅಗತ್ಯವಿದೆ.

ವೇಣು ಶರ್ಮ

ಲೇಖಕರು: ಸಂಸ್ಥಾಪಕರು, ‘ಮೈ ಅಂತರಾತ್ಮ’ ಮಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.