ADVERTISEMENT

ಕಸಾಪ ಅಧ್ಯಕ್ಷ ಮನು ಬಳಿಗಾರ್ ರಾಜೀನಾಮೆ ನೀಡಲಿ: ಕೆ.ನೀಲಾ

ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲೇ ಹೋರಾಟಗಾರ್ತಿ ಕೆ.ನೀಲಾ ಆಕ್ರೋಶ

ರಾಹುಲ ಬೆಳಗಲಿ
Published 5 ಫೆಬ್ರುವರಿ 2020, 19:30 IST
Last Updated 5 ಫೆಬ್ರುವರಿ 2020, 19:30 IST
ಕೆ.ನೀಲಾ
ಕೆ.ನೀಲಾ   

ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ‘6 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಈಗ ಆಳುವ ವರ್ಗದ ಅಡಿಯಾಳಾಗಿದ್ದು, ಇದಕ್ಕೆ ಕಾರಣರಾದ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ರಾಜೀನಾಮೆ ನೀಡಬೇಕು’ ಎಂದು ಹೋರಾಟಗಾರ್ತಿ ಕೆ.ನೀಲಾ ಆಗ್ರಹಿಸಿದರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ‘ಕಲ್ಯಾಣ ಕರ್ನಾಟಕ: ಅಂದು–ಇಂದು–ಮುಂದು’ ಕುರಿತ ಮೊದಲ ಗೋಷ್ಠಿಯಲ್ಲಿ ಹೀಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಪರಿಷತ್ತಿಗೆ ಆಳುವ ವರ್ಗವು ನೀಡುವ ಹಣ ಜನರ ತೆರಿಗೆಯಿಂದ ಬಂದಿದ್ದು. ಅದನ್ನು ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಬಿಡುಗಡೆ ಮಾಡಲು ನಿರಾಕರಿಸಿದ್ದನ್ನು ನಾನು ಸಾಹಿತಿಯಾಗಿ ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಸಭಿಕರಿಂದ ಕರತಾಡನ ವ್ಯಕ್ತವಾಯಿತು. ಭಾಷಣದಲ್ಲಿ ಅಲ್ಲಲ್ಲಿ ಅವರು ಸರ್ಕಾರದ ನಿಲುವು ಟೀಕಿಸಿದಾಗ ಮತ್ತು ಪರಿಷತ್ತಿನ ಧೋರಣೆ ಕಟುವಾಗಿ ಟೀಕಿಸಿದಾಗ, ಸಭಿಕರು ಚಪ್ಪಾಳೆ ತಟ್ಟಿದರು.

ADVERTISEMENT

‘ಶೃಂಗೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಬದಲಾವಣೆ ಮಾಡುವಂತೆ ಆಳುವ ವರ್ಗವು ಹೇಳಿದಾಗ, ಹಾಗೆ ಮಾಡಲು ಆಗದು ಎಂದು ಮನು ಬಳಿಗಾರ್ ಸಮಜಾಯಿಷಿ ನೀಡಬೇಕಿತ್ತು. ಆದರೆ ಹಾಗೆ ಮಾಡದ ಅವರು ರಾಜೀನಾಮೆ ನೀಡಲಿ. ಸರ್ವಾಧಿಕಾರಿ ಧೋರಣೆಯಿಂದ ಮುಕ್ತಗೊಳಿಸಿ ಪರಿಷತ್ತನ್ನು ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದರು.

ಕೊಪ್ಪಳ ಜಿಲ್ಲೆಯ ಆನೆಗೊಂದಿ ಉತ್ಸವದಲ್ಲಿಸಿಎಎ ವಿರುದ್ಧವಾಗಿ ಕವನ ವಾಚಿಸಿದಕವಿ ಸಿರಾಜ್ ಬಿಸರಳ್ಳಿ
ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿದ ಅವರು, ‘ಕವನ ಎಂಬುದು ಹಕ್ಕಿ. ಅದನ್ನು ಮುಕ್ತವಾಗಿ ಹಾರಲು ಬಿಡಬೇಕೆ ಹೊರತು ಕಟ್ಟಿ ಹಾಕಬಾರದು. ಆಡಳಿತ ವರ್ಗದ ಧೋರಣೆ ವಿರುದ್ಧ ಕವನ ವಾಚಿಸಿದ ಏಕೈಕ ಕಾರಣಕ್ಕೆ ಎಫ್‌ಐಆರ್‌ ದಾಖಲಿಸಿದ್ದು ಸರಿಯಲ್ಲ. ಅವರ ವಿರುದ್ಧದ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿ ನಿಂದಿಸಿದ ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದಾರೆ ಎಂಬ ನೆಪವೊಡ್ಡಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿರುವುದು ಮತ್ತು ಮಕ್ಕಳಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಖಂಡನೀಯ. ಈ ಪ್ರಕರಣ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ‘ಇಲ್ಲಿ ಮಂಡನೆಯಾದ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಆದರೆ, ಯಾವುದೇ ವಿಷಯವಾದರೂ ಮಿತಿ ಮೀರಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.