ADVERTISEMENT

‘ಕಾಶಿ ದರ್ಶನ’ ಪ್ಯಾಕೇಜ್‌ 9 ದಿನಗಳಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 16:08 IST
Last Updated 9 ಆಗಸ್ಟ್ 2023, 16:08 IST
   

ಬೆಂಗಳೂರು: ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಿ, 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ.‌

ಈ ಯೋಜನೆ ಅಡಿಯಲ್ಲಿ ಪ್ಯಾಕೇಜ್‌ಗೆ ಸರ್ಕಾರದಿಂದ ನೀಡಲಾಗುವ ಸಹಾಯ ಧನವನ್ನು ₹5,000 ಬದಲು ₹7,500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ರೈಲಿಗೆ ಹೊಸದಾಗಿ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಯಾತ್ರಾರ್ಥಿಗಳ ಜೊತೆಯಲ್ಲಿ ಇರಲಿದ್ದಾರೆ.

ADVERTISEMENT

ಇಲ್ಲಿವರೆಗೆ ನಾಲ್ಕು ಟ್ರಿಪ್‌ಗಳಾಗಿದ್ದು, 5ನೇ ಟ್ರಿಪ್‌ ಆಗಸ್ಟ್‌ 29ರಂದು ಬೆಂಗಳೂರಿನಿಂದ ಹೊರಟು ಸೆ.6ಕ್ಕೆ ಮರಳಲಿದೆ. 6ನೇ ಟ್ರಿಪ್‌ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್‌ 2ರವರೆಗೆ ಇರಲಿದೆ. ಈ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದೆ.

ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ  ತಿಳಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ‘ತಸ್ತಿಕ್ʼ ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.