ನವದೆಹಲಿ: ಪಶ್ಚಿಮಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ.ಕಸ್ತೂರಿ ರಂಗನ್ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಿರುವ ತೀರ್ಮಾನವನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸೋಮವಾರ ತಿಳಿಸಿದೆ.
ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ಅವರಿಗೆ ಪತ್ರ ಬರೆದು ವರದಿ ಬಗ್ಗೆ ರಾಜ್ಯದ ಆಕ್ಷೇಪಣೆಯನ್ನು ತಿಳಿಸಿದ್ದಾರೆ. ಸಚಿವಾಲಯವು ಜುಲೈ 31ರಂದು ಹೊರಡಿಸಿರುವ ಆರನೇ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಕೋರಿದ್ದಾರೆ.
‘ಕಸ್ತೂರಿರಂಗನ್ ವರದಿಯು ರಾಜ್ಯದ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು. ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದರೆ 10 ಜಿಲ್ಲೆಗಳ 33 ತಾಲ್ಲೂಕುಗಳ 1,499 ಗ್ರಾಮಗಳ ಲಕ್ಷಾಂತರ ಜನರಿಗೆ ಭಾರಿ ತೊಂದರೆ ಆಗಲಿದೆ. ಈ ವರದಿ ಬಗ್ಗೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ. ಇದಲ್ಲದೆ, ವರದಿಯಲ್ಲಿ ಗುರುತಿಸಿರುವ ಬಹುತೇಕ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಈಗಾಗಲೇ ಸಂರಕ್ಷಣೆ ಮಾಡಲಾಗುತ್ತಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
‘ಸಚಿವಾಲಯ ಹೊರಡಿಸಿದ್ದ ನಾಲ್ಕು ಹಾಗೂ ಐದನೇ ಅಧಿಸೂಚನೆಯನ್ನು ರಾಜ್ಯ ತಿರಸ್ಕರಿಸಿತ್ತು. ಮುಖ್ಯಮಂತ್ರಿ ನೇತೃತ್ವದ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಸ್ಥಳೀಯ ಜನರಿಗೆ ಉಂಟಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿತ್ತು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.