ಬೆಂಗಳೂರು: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಗೆ (ಕೆಎಸ್‌ಎಟಿ) ಸದಸ್ಯರನ್ನು ನೇಮಿಸಲು ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ನಗರದ ವಕೀಲರಾದ ನರಸಿಂಹರಾಜು, ಎಸ್.ರಾಜು ಮತ್ತು ಎಸ್.ತ್ಯಾಗರಾಜ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕೆಎಎಸ್‌ಎಟಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ.
ಅರ್ಜಿಯಲ್ಲಿ ಏನಿದೆ?:
‘ಸರ್ಕಾರಿ ನೌಕರರ ಸೇವಾ ತಗಾದೆಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಕೆಎಟಿ ವಿಚಾರಣೆ ನಡೆಸುತ್ತದೆ. ಬೆಂಗಳೂರಿನಲ್ಲಿ ಪ್ರಧಾನ ಪೀಠ, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಾದೇಶಿಕ ಪೀಠಗಳಿವೆ. ಬೆಂಗಳೂರು ಪ್ರಧಾನ ಪೀಠದಲ್ಲಿ ಸದಸ್ಯರಿಲ್ಲದೆ ಪ್ರಕರಣದ ವಿಚಾರಣೆಗೆ ತೊಂದರೆ ಉಂಟಾಗಿದೆ. ಆದ್ದರಿಂದ, ಖಾಲಿಯಿರುವ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಾಲಿ ಸದಸ್ಯರ ಸೇವಾವಧಿ ಮುಗಿಯವ ಆರು ತಿಂಗಳಿಗೆ ಮುಂಚಿತವಾಗಿಯೇ ಹೊಸ ಸದಸ್ಯರ ನೇಮಕಾತಿ ಪ್ರಕ್ರಿಯೆಯ ಮೇಲ್ವಿಚಾರಣೆಗೆ ವಿಶೇಷ ಸಮಿತಿ ರಚಿಸಬೇಕು. ಹೊಸ ಸದಸ್ಯರ ನೇಮಕವಾಗುವ ತನಕ ನ್ಯಾಯಾಂಗ ಸದಸ್ಯ ಟಿ.ನಾರಾಯಣ ಅವರನ್ನು ಸೇವೆಯಲ್ಲಿ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.