ADVERTISEMENT

ನೀಗಿದ ದಶಕಗಳ ದಾಹ: 110 ಹಳ್ಳಿಗಳಿಗೆ ಹರಿದಳು ‘ಕಾವೇರಿ’

50 ಲಕ್ಷ ಜನರ ದಾಹ ತಣಿಸುವ ಯೋಜನೆ ಲೋಕಾರ್ಪಣೆ

ಗಾಣಧಾಳು ಶ್ರೀಕಂಠ
Published 17 ಅಕ್ಟೋಬರ್ 2024, 0:35 IST
Last Updated 17 ಅಕ್ಟೋಬರ್ 2024, 0:35 IST
<div class="paragraphs"><p>ಕಾವೇರಿ ಐದನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಕಳಶದ ನೀರನ್ನು ಸುರಿಯುವ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿದರು. </p></div>

ಕಾವೇರಿ ಐದನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಕಳಶದ ನೀರನ್ನು ಸುರಿಯುವ ಮೂಲಕ ಬುಧವಾರ ಲೋಕಾರ್ಪಣೆಗೊಳಿಸಿದರು.

   

ಪ್ರಜಾವಾಣಿ ಚಿತ್ರ- ಪ್ರಶಾಂತ್ ಎಚ್.ಜಿ.

ತೊರೆಕಾಡನಹಳ್ಳಿ(ಮಂಡ್ಯ): 2008ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆಯನ್ನು ಬುಧವಾರ ಜನಸೇವೆಗೆ ಸಮರ್ಪಿಸಲಾಯಿತು. ಇದರಿಂದಾಗಿ ಬೆಂಗಳೂರಿನ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.

ADVERTISEMENT

ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ ಜಲ ಶುದ್ಧೀಕರಣ ಘಟಕದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯೋಜನೆಯನ್ನು ಲೋಕಾರ್ಪಣೆ ಮಾಡಿದರು.

ಈ ಯೋಜನೆಯಿಂದ ಬೆಂಗಳೂರು ಮಹಾನಗರಕ್ಕೆ ಹೆಚ್ಚುವರಿಯಾಗಿ ಪ್ರತಿದಿನ 7.75 ಕೋಟಿ ಲೀಟರ್‌ ಕುಡಿಯುವ ನೀರು ಲಭ್ಯವಾಗಲಿದೆ. ಸದ್ಯ ನಾಲ್ಕು ಹಂತಗಳಿಂದ ಬೆಂಗಳೂರಿಗೆ ಪ್ರತಿದಿನ 14.50 ಕೋಟಿ ಲೀಟರ್‌ ನೀರು ಪೂರೈಕೆಯಾಗುತ್ತಿದ್ದು, ಈಗ ಒಟ್ಟು ಪ್ರತಿದಿನ 22.25 ಕೋಟಿ ಲೀಟರ್‌ ನೀರು ಲಭ್ಯವಾಗಲಿದೆ.

ಯಶವಂತಪುರ, ದಾಸರಹಳ್ಳಿ, ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ, ಮಹದೇವಪುರ, ರಾಜರಾಜೇಶ್ವರಿನಗರ ಮತ್ತು ಕೆ.ಆರ್‌. ಪುರ ವಿಧಾನಸಭಾ ಕ್ಷೇತ್ರಗಳಿಗೆ ಐದನೇ ಹಂತದ ಯೋಜನೆಯಡಿ ನೀರು ಪೂರೈಕೆಯಿಂದ ಅನುಕೂಲವಾಗಲಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐದು ಲಕ್ಷ ನೀರಿನ ಸಂಪರ್ಕಗಳನ್ನು ಹೊಸದಾಗಿ ಕಲ್ಪಿಸುವ ಗುರಿಯನ್ನು ಜಲಮಂಡಳಿ ಹೊಂದಿದೆ.

ಈ ಏಳೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಿಂದೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ರೂಪಿಸಿದ್ದ ನೀರು ಪೂರೈಕೆ ವ್ಯವಸ್ಥೆಯೇ ಮುಂದುವರಿದಿತ್ತು. ಬಹುತೇಕ ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನೇ ನೀರು ಪೂರೈಕೆಗೆ ಆಶ್ರಯಿಸಲಾಗಿತ್ತು. ಕಳೆದ ಬೇಸಿಗೆಯಲ್ಲಿ ಈ ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿ ಬಾಧಿಸಿತ್ತು. ಕಾವೇರಿ ಐದನೇ ಹಂತದ ನೀರು ಪೂರೈಕೆಗೆ ಚಾಲನೆ ದೊರೆತಿರುವುದರಿಂದ ಈ ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿದ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಉದ್ದೇಶದೊಂದಿಗೆ ಐದನೇ ಹಂತದ ಯೋಜನೆಗೆ 2014ರಲ್ಲಿ ಅನುಮೋದನೆ ನೀಡಲಾಗಿತ್ತು. ₹ 4,333 ಕೋಟಿ ವೆಚ್ಚದ ಯೋಜನೆಗೆ ಶೇಕಡ 16ರಷ್ಟನ್ನು ರಾಜ್ಯ ಸರ್ಕಾರ ಅನುದಾನದ ರೂಪದಲ್ಲಿ ಒದಗಿಸಿದೆ. ಶೇ 84ರಷ್ಟು ಮೊತ್ತವನ್ನು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿಯಿಂದ (ಜೈಕಾ) ಸಾಲ ಪಡೆಯಲಾಗಿದೆ.

ಜೈಕಾ ಪ್ರತಿನಿಧಿಗಳು, ರಾಜ್ಯದ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು, ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಪೂರೈಕೆಯಾಗುವ 110 ಹಳ್ಳಿಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ  ಶಾಸಕರಾದ ಎಸ್. ಮುನಿರಾಜು, ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್‌, ಎಸ್.ಆರ್. ವಿಶ್ವನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು‌.

‘ಆರನೇ ಹಂತಕ್ಕೆ ₹ 7200 ಕೋಟಿ’

‘ಭವಿಷ್ಯದ ದಿನಗಳಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿನ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಂಡು ₹ 7200 ಕೋಟಿ ವೆಚ್ಚದಲ್ಲಿ ಕಾವೇರಿ ಆರನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಐದನೇ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು ‘ಆರನೇ ಹಂತದ ಯೋಜನೆಯನ್ನು ನಮ್ಮ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳಿಸುತ್ತೇವೆ. ಈ ಯೋಜನೆಯಿಂದ ನಗರಕ್ಕೆ ಪ್ರತಿದಿನ 5 ಕೋಟಿ ಲೀಟರ್‌ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದೆ’ ಎಂದರು. 'ಕಾವೇರಿ ಆರನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು. ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

‘ಮೇಕೆದಾಟು ಯೋಜನೆ ಅನುಷ್ಠಾನ ಖಚಿತ’

'ನಮಗೆ ವಿಶ್ವಾಸವಿದೆ ನಮ್ಮ ಸರ್ಕಾರದ ಅವಧಿಯಲ್ಲೇ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುತ್ತೇವೆ. ಅವರ ನೇತೃತ್ವದಲ್ಲಿ ಯೋಜನೆಗೆ ಭೂಮಿಪೂಜೆ ನಡೆಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನಮಗೆ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಸುಪ್ರೀಂ ಕೋರ್ಟ್ ಆದೇಶದಂತೆ ಈ ವರ್ಷ ಕೆಆರ್‌ಎಸ್‌ನಿಂದ ತಮಿಳುನಾಡಿಗೆ 132 ಟಿಎಂಸಿ ಅಡಿ ನೀರು ಹರಿಸಬೇಕಾಗಿತ್ತು. ಆದರೆ ಈವರೆಗೂ 213 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂಬ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆ ಮಾಡಿದೆವು. ಈ ಯೋಜನೆ ಮೂಲಕ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಲು ಬದ್ಧರಾಗಿದ್ದೇವೆ’ ಎಂದರು.

‘ಕೇಂದ್ರ ಅನುಮೋದನೆ ನೀಡುತ್ತಿಲ್ಲ’

‘ಮೇಕೆದಾಟು ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಅನುಮೋದನೆ ನೀಡದೆ ಅನ್ಯಾಯ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗವಾಗುತ್ತದೆ. ಆದರೆ ಅವರು ವಿನಾ ಕಾರಣ ಕ್ಯಾತೆ ತೆಗೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಸಿ ಅನುಮೋದನೆ ಕೊಡಿಸಬಹುದು. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಜೆಡಿಎಸ್‌ನ ಯಾವುದೇ ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೇಂದ್ರದಲ್ಲಿ ಸಚಿವರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರು ಯಾಕೆ ಅನುಮತಿ ಕೊಡಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.