ADVERTISEMENT

ವಾರಾಣಸಿಯ ‘ಗಂಗಾ ಆರತಿ’ ಮಾದರಿಯಲ್ಲೇ ‘ಕಾವೇರಿ ಆರತಿ’ ಆಯೋಜನೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 7:26 IST
Last Updated 22 ಜುಲೈ 2024, 7:26 IST
   

ಮಂಡ್ಯ: ವಾರಾಣಸಿಯಲ್ಲಿ ನಡೆಯುವ ‘ಗಂಗಾ ಆರತಿ’ ಮಾದರಿಯಲ್ಲೇ ಕಾವೇರಿ ನದಿಗೆ ‘ಕಾವೇರಿ ಆರತಿ’ ನೆರವೇರಿಸಲು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. 

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್‌.ಎಸ್‌. ಜಲಾಶಯವನ್ನು ಸೋಮವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ವೀಕ್ಷಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮಂಡ್ಯ ಮತ್ತು ಕೊಡಗು ಜಿಲ್ಲೆಗಳ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ತಂಡವನ್ನು ರಚಿಸಿ, ಗಂಗಾ ಆರತಿ ಕಾರ್ಯಕ್ರಮವನ್ನು ಅಧ್ಯಯನ ಮಾಡಿ, ಒಂದು ತಿಂಗಳೊಳಗೆ ವರದಿ ನೀಡಲು ಸೂಚಿಸಿದ್ದೇನೆ. ಅದೇ ಮಾದರಿಯಲ್ಲಿ ವಿನೂತನವಾಗಿ ‘ಕಾವೇರಿ ಆರತಿ’ಯನ್ನು ಕಾವೇರಿ ನೀರಾವರಿ ನಿಗಮ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ಶೀಘ್ರ ನೆರವೇರಿಸುತ್ತೇವೆ ಎಂದು ಹೇಳಿದರು. 

ADVERTISEMENT

ಕೆ.ಆರ್‌.ಎಸ್‌. ಜಲಾಶಯವು ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ, ಅಧಿವೇಶನ ಮುಗಿದ ನಂತರ ಕಾವೇರಿ ತಾಯಿಗೆ ಬಾಗಿನ ಅರ್ಪಿಸುತ್ತೇವೆ ಎಂದರು. 

‘ವರುಣನ ಕೃಪೆಯಿಂದ ಆದೇಶ ಪಾಲನೆ’

ಈ ಬಾರಿ ವರುಣನ ಕೃಪೆಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೆ.ಆರ್‌.ಎಸ್‌.ಜಲಾಶಯ ಭರ್ತಿಯಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿಯು (ಸಿ.ಡಬ್ಲ್ಯು.ಆರ್‌.ಸಿ) ಜುಲೈ 12ರಿಂದ ಜುಲೈ 31ರವರೆಗೆ 1 ಟಿಎಂಸಿಯಂತೆ 20 ಟಿಎಂಸಿ ಅಡಿ ನೀರು ಬಿಡಿ ಎಂದು ಸೂಚಿಸಿತ್ತು.

ಗಣಿಗಾರಿಕೆ ಮಾಡಲು ಎಲ್ಲಿ ಬೇಕಾದರೂ ಜಾಗ ಸಿಗುತ್ತದೆ. ಆದರೆ, ನಮಗೆ ಅಣೆಕಟ್ಟೆ ಸಿಗುವುದಿಲ್ಲ. ಕೆಆರ್‌ಎಸ್‌ ಅಣೆಕಟ್ಟೆ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದೇವೆ.
ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

ಇದುವರೆಗೆ ತಮಿಳುನಾಡಿಗೆ ಕೆ.ಆರ್‌.ಎಸ್‌., ಕಬಿನಿ, ಹಾರಂಗಿ, ಹೇಮಾವತಿ ಅಣೆಕಟ್ಟೆಯಿಂದ ಬಿಳಿಗುಂಡ್ಲು ಮೂಲಕ ಒಟ್ಟಾರೆ 30 ಟಿಎಂಸಿ ಅಡಿ ನೀರು ಹರಿದು ಹೋಗಿದೆ. 40 ಟಿಎಂಸಿ ಅಡಿ ನೀರು ಬೇಡಿಕೆಯಲ್ಲಿ ಬಾಕಿ 10 ಟಿಎಂಸಿ ಅಡಿ ನೀರು ಹರಿಸಿದರೆ ಸಹಜ ಸ್ಥಿತಿಗೆ ಬರಲಿದ್ದೇವೆ. ರಾಜ್ಯದ ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. 

‘1,657 ಕೆರೆಗಳ ಭರ್ತಿಗೆ ಕ್ರಮ’

ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 1657 ಕೆರೆಗಳಿದ್ದು, ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಕೊರತೆಯಿಲ್ಲ. 30 ಲಕ್ಷ ರೈತರಿಗೆ ₹25 ಸಾವಿರ ಕೋಟಿ ಸಾಲ ವಿತರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. 

’ಕೆಲವರಿಗೆ ಪ್ರಚಾರ ಬೇಕು‘

‌ಸರ್ವಪಕ್ಷಗಳ ಸಭೆಗೂ ಮೊದಲೇ ಡ್ಯಾಂನಿಂದ ನೀರು ಬಿಡುಗಡೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕೆಲವರಿಗೆ ಪ್ರಚಾರ ಬೇಕು ಅದಕ್ಕೆ ಮಾತನಾಡುತ್ತಾರೆ. ನನಗೆ ಪ್ರಚಾರದ ಅವಶ್ಯವಿಲ್ಲ. ನಾನು ಯಾರಿಗೋ ಉತ್ತರ ಕೊಡುವ ಅಗತ್ಯವಿಲ್ಲ. ನನ್ನ ಡ್ಯೂಟಿ, ನಾನುಂಟು, ರೈತರುಂಟು, ರಾಜ್ಯವುಂಟು. ಅವರಿಗೆ ನನ್ನ ನೆನಸಿಕೊಳ್ಳಲಿಲ್ಲ ಅಂದರೆ ನಿದ್ದೆ ಬರಲ್ಲ, ಏನು‌ ಮಾಡೋದು’ ಎಂದು ವ್ಯಂಗ್ಯವಾಡಿದರು. 

‘ಮೇಕೆದಾಟು ಯೋಜನೆ’ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಯೋಜನೆಗೆ ಸಂಬಂಧಪಟ್ಟ ದಾಖಲೆ, ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈ ಯೋಜನೆ ಯಾವಾಗ ಸಾಕಾರವಾಗುತ್ತದೆ ಎಂಬುದನ್ನು ಕಾಲವೇ ಉತ್ತರ ನೀಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.