ಹೂವಿನಹಡಗಲಿ: ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಅವರು ತಮ್ಮದೇ ಪಕ್ಷದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ವಿರುದ್ಧ ಹರಿಹಾಯ್ದಿದ್ದು, 22 ಜನ ಬೆಂಬಲಿಗರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪಟ್ಟಣದ ಕಾಯಕ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರನಾಯ್ಕ ಬೆಂಗಳೂರಿನಲ್ಲಿ ಬಂಗಲೆ, ವಾಣಿಜ್ಯ ಸಂಕಿರ್ಣ ಹೊಂದಿದ್ದಾರೆ. ಹಡಗಲಿ, ಹರಪನಹಳ್ಳಿ, ಮುಂಡರಗಿ, ದಾವಣಗೆರೆಯಲ್ಲಿ ಅಪಾರ ಪ್ರಮಾಣದ ಆಸ್ತಿಗಳು ಬೇನಾಮಿ ಹೆಸರಲ್ಲಿವೆ. ಹರಪನಹಳ್ಳಿಯಲ್ಲಿ ಕ್ರಷರ್, ಮಿಕ್ಸರ್ ಪ್ಲಾಂಟ್ ಹೊಂದಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರು, ಹರಪನಹಳ್ಳಿಯ ಅವರ ಸಂಬಂಧಿಗಳೇ ಅಕ್ರಮ ಆಸ್ತಿ ವಿವರವನ್ನು ನನಗೆ ಒದಗಿಸಿದ್ದಾರೆ ಎಂದು ತಿಳಿಸಿದರು.
‘ಚಂದ್ರನಾಯ್ಕ, ಮಂಜುಳಾ ಪೋಮ್ಯಾನಾಯ್ಕ, ಕುಮಾರನಾಯ್ಕ, ಆನಂದನಾಯ್ಕ, ಐ. ಚಿದಾನಂದ ಸೇರಿ 22 ಜನರ ಹೆಸರಲ್ಲಿ ಆಸ್ತಿಗಳು ಇವೆ. ಬೇನಾಮಿ ಆಸ್ತಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಶಾಸಕ ನುಣುಚಿಕೊಳ್ಳುತ್ತಿರುವುದರಿಂದ ಈ ಆಸ್ತಿಗಳನ್ನು ಯಾರೂ ಅವರಿಗೆ ಹಿಂದಿರುಗಿಸದಂತೆ ಮಾಧ್ಯಮ ಮೂಲಕ ಮನವಿ ಮಾಡುತ್ತೇನೆ’ ಎಂದರು.
ಪರಮೇಶ್ವರನಾಯ್ಕ1999ರಲ್ಲಿ ಮೊದಲ ಬಾರಿ ಶಾಸಕನಾದಾಗ ಒಂದು ಜನತಾ ಮನೆ, ಏಳು ಎಕರೆ ಜಮೀನು ಮಾತ್ರ ಇತ್ತು. ಈಗ ಲೆಕ್ಕಕ್ಕೆ ಸಿಗದಷ್ಟು ಅಕ್ರಮ ಆಸ್ತಿ ಮಾಡಿದ್ದಾರೆ. ಲೋಕಾಯುಕ್ತದವರು ಶಾಸಕರಾದ ನೆಹರೂ ಓಲೆಕಾರ್, ಮಾಡಾಳ್ ವಿರುಪಾಕ್ಷಪ್ಪ ಮೇಲೆ ದಾಳಿ ಮಾಡಿದಂತೆ ಪರಮೇಶ್ವರನಾಯ್ಕ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನೋಟಿಸ್‌ಗೆ ಉತ್ತರ ಕೊಟ್ಟಿರುವೆ:
ಶಾಸಕರನ್ನು ಟೀಕಿಸಿದ್ದಕ್ಕಾಗಿ ನೀಡಿರುವ ನೋಟಿಸ್‌ಗೆ ಈಗಾಗಲೇ ಕಾರಣ ಸಮೇತ ಉತ್ತರ ಕೊಟ್ಟಿರುವೆ. ನಾನೀಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವೆ. ಸತ್ಯ ಮಾತಾಡಲು ನನಗೆ ಯಾವ ಹಿಂಜರಿಕೆ ಇಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಟ ಮುಂದುವರಿಸುವೆ ಎಂದು ಹೇಳಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಕೃಷ್ಣನಾಯ್ಕ, ಹರೀಶ್, ಮೋತಿನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.