ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಪೂರೈಸಿದ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಪೊಲೀಸರು ಬರುವ ಕೆಲವೇ ಕ್ಷಣಗಳ ಮೊದಲು ಅಪಾರ್ಟ್‌ಮೆಂಟ್ ಹಿಂಭಾಗದ ಕಾಂಪೌಂಡ್ ಮೇಲಿಂದ ಜಿಗಿದು ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾನೆ.
ಕೆಇಎ ಪರೀಕ್ಷೆಯಲ್ಲಿ ಹಣಪಡೆದು ಐವರು ಅಭ್ಯರ್ಥಿಗಳಿಗೆ ಬ್ಲೂಟೂತ್ ಪೂರೈಸಿದ ಆರೋಪದಡಿ ರುದ್ರಗೌಡ ವಿರುದ್ಧ ಅಫಜಲಪುರ, ಅಶೋಕನಗರ ಮತ್ತು ವಿಶ್ವವಿದ್ಯಾಲಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಅಕ್ಟೋಬರ್ 28ರ ಪರೀಕ್ಷೆಯ ಬಳಿಕ ರುದ್ರಗೌಡ ತಲೆ ಮರೆಸಿಕೊಂಡಿದ್ದ. ನಗರದ ಜೇವರ್ಗಿಯ ರಸ್ತೆಯ ಅಪಾರ್ಟ್‌ಮೆಂಟ್ ಒಂದರಲ್ಲಿ ಉಳಿದುಕೊಂಡಿದ್ದ. ಅಫಜಲಪುರ ಠಾಣೆಯ ಪೊಲೀಸರು ಆತ ತಂಗಿದ್ದ ಅಪಾರ್ಟ್‌ಮೆಂಟ್ ತಲುಪುವ ಕೆಲವೇ ಸೆಕೆಂಡ್‌ಗಳಲ್ಲಿ ಹಿಂಬದಿಯ ಕಾಂಪೌಂಡ್ ಮತ್ತು ಗೇಟ್ ಹಾರಿ ಓಡಿ ಹೋಗಿದ್ದಾನೆ. ಆತ ಪರಾರಿಯಾದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಆರ್.ಡಿ. ಪಾಟೀಲ ನಗರದಲ್ಲೇ ಇದ್ದರೂ ಬಂಧಿಸುವಲ್ಲಿ ವಿಫಲರಾದ ಪೊಲೀಸರ ನಡೆ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಅಕ್ಟೋಬರ್ ಮೊದಲ ವಾರದಲ್ಲಿ ಬಸವರಾಜ ಪಾಟೀಲ ಹೆಸರಿನಲ್ಲಿ ₹10 ಸಾವಿರ ಕೊಟ್ಟು ಅಪಾರ್ಟ್‌ಮೆಂಟ್‌ನ ಮನೆಯೊಂದು ಬಾಡಿಗೆ ಪಡೆದಿದ್ದ. ಒಮ್ಮೆ ಮಾತ್ರ ಅಡ್ಡಾದಿಡ್ಡಿಯಾಗಿ ಕಾರು ನಿಲ್ಲಿಸಿದ್ದನ್ನು ಅಲ್ಲಿನ ನಿವಾಸಿಗಳು ನೋಡಿದ್ದರು. ಅದಾದ ಬಳಿಕ ನವೆಂಬರ್ 5ರ ರಾತ್ರಿ 11ಕ್ಕೆ ಬಾಡಿಗೆಯ ಮನೆ ಒಳಹೋದ. ಮರುದಿನ (ನ.6) ಪೊಲೀಸರು ವಿಚಾರಣೆಗೆ ಬಂದಿದ್ದಾಗಲೇ ಸ್ಥಳೀಯರಿಗೆ ಗೊತ್ತಾಗಿದ್ದು ಆತ ಹಗರಣವೊಂದರ ಆರೋಪಿ ರುದ್ರಗೌಡ ಎಂಬುದು.
ನವೆಂಬರ್ 19ರಂದು ನಡೆಯುವ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಗೂ ಕೆಲವು ಅಭ್ಯರ್ಥಿಗಳಿಂದ ಹಣ ಪಡೆದು ಒಪ್ಪಂದ ಮಾಡಿಕೊಂಡಿದ್ದ. ಹೀಗಾಗಿ, ಅವರಿಗೆ ಬ್ಲೂಟೂತ್ ವ್ಯವಸ್ಥೆ ಮಾಡಿಕೊಡಲು ಕಲಬುರಗಿ ನಗರಕ್ಕೆ ಬಂದು ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಂಡಿದ್ದ. ಇಲ್ಲಿಯೇ ಕುಳಿತು ಕೆಇಎ, ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಅಕ್ರಮ ಎಸಗಿರಬಹುದು ಎಂದು ಶಂಕಿಸಲಾಗಿದೆ.
‘ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಳ್ಳುವ ಮುನ್ನ ರುದ್ರಗೌಡ ಫೋನ್‌ನಲ್ಲಿ ಮಾತನಾಡುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಂಧನಕ್ಕೆ ಪೊಲೀಸರು ಬರುತ್ತಿರುವ ಮಾಹಿತಿಯು ಇಲಾಖೆಯರಿಂದಲೇ ಆತನಿಗೆ ಹೋಗಿರಬಹುದು. ಮುಖ್ಯ ದ್ವಾರದಲ್ಲಿ ಪೊಲೀಸರು ಬರುತ್ತಿದ್ದಂತೆ ಹಿಂಬದಿಯಿಂದ ತಪ್ಪಿಸಿಕೊಂಡು ಹೋಗಲು ಹೇಗೆ ಸಾಧ್ಯ’ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ
ಕೇಳಿಬರುತ್ತಿವೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಮೂರು ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ರುದ್ರಗೌಡ ಅವರು ವಕೀಲ ಶ್ಯಾಮಸುಂದರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶ ಮೋಹನ್ ಬಾಡಗಂಡಿ ಅವರು ಅರ್ಜಿಯನ್ನು ವಜಾ ಮಾಡಿದರು. ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ
ಪಿ. ನರಸಿಮೂಲು ವಾದ ಮಂಡಿಸಿದ್ದರು.
‘ನಗರದಿಂದ ತಪ್ಪಿಸಿಕೊಂಡ ರುದ್ರಗೌಡ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳು ನಾನಾ ಕಡೆ ಹುಡುಕಾಟ ನಡೆಸುತ್ತಿವೆ’ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಆರ್.ಡಿ.ಪಾಟೀಲ ವಿರುದ್ಧ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರತ್ಯೇಕವಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ನಲ್ಲಿ ಇರುವ ಖಚಿತ ಮಾಹಿತಿ ಸಿಗುತ್ತಿದ್ದಂತೆ ಗ್ರಾಮೀಣ ಪೊಲೀಸ್ ಮತ್ತು ಪೊಲೀಸ್ ಕಮಿಷನರೇಟ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರೆ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ತುಮಕೂರು ಜಿಲ್ಲೆಯಲ್ಲಿ ದಾಖಲಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮದ ಸಂಬಂಧ 2023ರ ಜನವರಿ 20ರಂದು ರುದ್ರಗೌಡನನ್ನು ಬಂಧಿಸಲು ಅಕ್ಕಮಹಾದೇವಿ ಕಾಲೊನಿಯ ನಿವಾಸಕ್ಕೆ ಸಿಐಡಿ ಪೊಲೀಸರು ತೆರಳಿದ್ದರು. ಆಗ ‘ಯಾವ ಕೇಸು, ನನಗೇನೂ ಗೊತ್ತೇ ಇಲ್ಲ’ ಎನ್ನುತ್ತ ಸಿಐಡಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ. ಹೀಗಾಗಿ, ಮುನ್ನೆಚ್ಚರಿಕೆ ಇಲ್ಲದೆ ಪೊಲೀಸರು ತೆರಳಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೆಇಎ ನೇಮಕಾತಿ ಹಗರಣದಲ್ಲಿ ಯಾರಾದರೂ ನನ್ನ ನೆಂಟರಿದ್ದರೆ ಬಿಜೆಪಿಯವರು ದಾಖಲೆಗಳನ್ನು ಕೊಡಬೇಕು. ಅದನ್ನು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ.–ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಐಪಿಎಸ್ ಅಧಿಕಾರಿ ಮಾಹಿತಿ ಕೊಟ್ಟರೂ ಹಿಡಿಯಲು ಆಗಲಿಲ್ಲ. ಕಾಣದ ಶಕ್ತಿ ಇದರ ಹಿಂದೆ ಕೆಲಸ ಮಾಡುತ್ತಿದ್ದು, ಸಚಿವರೇ ಆರ್.ಡಿ.ಪಾಟೀಲಗೆ ಬೆಂಬಲ ಕೊಡುತ್ತಿದ್ದಾರೆ–ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.