ADVERTISEMENT

ಬ್ಲೂಟೂತ್ ಪ್ರಕರಣ: ಪ್ರಾಥಮಿಕ ಮಾಹಿತಿ ಬಳಿಕ ಮುಂದಿನ ನಿರ್ಧಾರ– ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 9:11 IST
Last Updated 1 ನವೆಂಬರ್ 2023, 9:11 IST
   

ಕಲಬುರಗಿ: ‘ಕೆಇಎ ನೇಮಕಾತಿ ಪರೀಕ್ಷೆಯ ಬ್ಲೂಟೂತ್ ಪ್ರಕರಣದ ಪೊಲೀಸ್ ತನಿಖೆಯ ಪ್ರಾಥಮಿಕ ಮಾಹಿತಿ ಬಂದ ಬಳಿಕ, ಪ್ರಕರಣವನ್ನು ಸಿಐಡಿಗೆ ಒಪ್ಪಿಸುವುದರ ಕುರಿತು ನೋಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬ್ಲೂಟೂತ್ ಪ್ರಕರಣ ಸಿಐಡಿಗೆ ನೀಡುವ ಬಗ್ಗೆ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ‘ಮುಂಜಾಗ್ರತಾ ಕ್ರಮ ವಹಿಸಿದ್ದರಿಂದ 24 ಗಂಟೆಯಲ್ಲಿ ಆರೋಪಿಗಳ ಬಂಧನವಾಗಿದೆ. ನಗರದಲ್ಲಿ ಮಾತ್ರವೇ ಕಣ್ತಪ್ಪಿನಿಂದ ಇಬ್ಬರು ಅಭ್ಯರ್ಥಿಗಳು ಬ್ಲೂಟೂತ್ ಬಳಸಿ 45 ನಿಮಿಷ ಪರೀಕ್ಷೆ ಬರೆದಿದ್ದು, ತಕ್ಷಣವೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಶಾಮೀಲಾಗಿ ಹಣಪಡೆದಂತಹ ಊಹಾಪೋಹ, ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ಕರೆಗಳ ದಾಖಲು, ತಾಂತ್ರಿಕ ಅಂಶಗಳು ಸೇರಿ ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಸಿಐಡಿಗೆ ಒಪ್ಪಿಸುವುದನ್ನು ನೋಡೋಣ’ ಎಂದರು.

‘ಯಾವುದೇ ಅಧಿಕಾರಿ ಈ ಅಕ್ರಮದಲ್ಲಿ ಶಾಮೀಲಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ರಕ್ಷಣೆ ಮಾಡುವುದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ದಾಖಲೆಗಳನ್ನು ಮುಂದಿಟ್ಟು ಮಾತಾಡಲಿ’ ಎಂದು ಹೇಳಿದರು.

ADVERTISEMENT

‘ದೆಹಲಿಯಲ್ಲಿ ಬಿಜೆಪಿಯ ರಾಜ್ಯದ ನಾಯಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಜಿ ಸಿ.ಎಂ. ಸಂಸದ ಸದಾನಂದಗೌಡ ಅವರು ದೆಹಲಿಗೆ ಹೋಗಿ ಸಚಿವರ ಮನೆ ಬಾಗಿಲು ಬಳಿ ಕಾದು ಕುಳಿತರು ಬಾಗಿಲು ತೆರೆಯಲಿಲ್ಲ. ಕರ್ನಾಟಕದ ಬಿಜೆಪಿ ನಾಯಕರಿಗೆ ಸ್ವಲ್ಪವೂ ಸ್ವಾಭಿಮಾನ ಇಲ್ಲವೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ತಮ್ಮಲ್ಲಿನ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್‌ನತ್ತ ಬೆರಳು ತೋರುತ್ತಿದ್ದಾರೆ. ಡಿಸಿಎಂ ಆಗಿದ್ದ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ದಕ್ಷತೆ ಇಲ್ಲದಕ್ಕೆ ಸಚಿವರಾದರು. ಸಾಕ್ಷಿ ಪುರಾವೆ ಇಲ್ಲದೆ ಹಗುರವಾಗಿ ಮಾತಾಡುತ್ತಿದ್ದು, ಬಿಜೆಪಿಯವರೇ ಬೆಲೆ ಕೊಡುತ್ತಿಲ್ಲ. ಈಗ ವಿರೋಧ ಪಕ್ಷದ ನಾಯಕರಾಗಲು ಮುಖಾಭಿನಯ ಮಾಡುತ್ತಿದ್ದರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.