ADVERTISEMENT

ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೀಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:08 IST
Last Updated 7 ಜುಲೈ 2024, 15:08 IST
   

ಬೆಂಗಳೂರು: ವಿವಿಧ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಕ್ಕಾಗಿ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ‘ಪರೀಕ್ಷಾ ವೀಕ್ಷಕ’ರನ್ನು ನೇಮಕ ಮಾಡಲು ಕರ್ನಾಟಕ ಪರೀಕ್ಷಾ ‍ಪ್ರಾಧಿಕಾರ ಕ್ರಮ ತೆಗೆದುಕೊಂಡಿದೆ.

ಪರೀಕ್ಷಾ ವೀಕ್ಷಕರಾಗಿ ನೇಮಕ ಮಾಡಲು ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸುವಂತೆ ಇದೇ ಜೂನ್‌ 22ರಂದು ಪ್ರಾಧಿಕಾರವು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಪರೀಕ್ಷಾ ವೀಕ್ಷಕರಾಗಿ ನೇಮಕ ಮಾಡಲು ಆಯ್ಕೆ ಮಾಡಲಾದ ಸಿಬ್ಬಂದಿಯ ಪಟ್ಟಿಯನ್ನು ಇಲಾಖೆಯು ಪ್ರಾಧಿಕಾರಕ್ಕೆ ನೀಡಿದೆ.

‘ಈ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಕಷ್ಟವಾಗಿದೆ. ಅಕ್ರಮವನ್ನು ತಪ್ಪಿಸಿ, ನ್ಯಾಯಯುತವಾಗಿ ಪರೀಕ್ಷೆ ನಡೆಸಲು ಹಲವು ಕ್ರಮಗಳನ್ನು ರೂಪಿಸಲಾಗುತ್ತಿದೆ. ಪರೀಕ್ಷಾ ವೀಕ್ಷಕರ ನೇಮಕವೂ ಅಂತಹ ಕ್ರಮಗಳಲ್ಲಿ ಒಂದು. ಜುಲೈ ತಿಂಗಳಲ್ಲಿ ನಡೆಯುವ ಪರೀಕ್ಷೆಗಳಿಗೆ ನೇಮಕ ಮಾಡಲು, ಪದವಿ ಕಾಲೇಜುಗಳ 60 ಹಿರಿಯ ಉಪನ್ಯಾಸಕರ ಅಗತ್ಯವಿದೆ’ ಎಂದು ಪ್ರಾಧಿಕಾರವು ಕೋರಿತ್ತು.

ADVERTISEMENT

‘ಪರೀಕ್ಷಾ ವೀಕ್ಷಕರಾಗಿ ನೇಮಕವಾದ ಉಪನ್ಯಾಸಕರ ಸ್ವ–ಜಿಲ್ಲೆ ಮತ್ತು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗುತ್ತದೆ’ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.