ADVERTISEMENT

ಯುಜಿಸಿಇಟಿ-2024: ಜೂನ್ 25ರಿಂದ ದಾಖಲೆಗಳ ಆಫ್‌ಲೈನ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 23:30 IST
Last Updated 23 ಜೂನ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಯುಜಿಸಿಇಟಿ- 2024ರ ಆನ್‌ಲೈನ್ ಅರ್ಜಿಯಲ್ಲಿ ಅರ್ಹತಾ ಕಂಡಿಕೆಗಳಾದ ‘ಬಿ’, ‘ಸಿ’, ‘ಡಿ’, ‘ಐ’, ‘ಜೆ’, ‘ಕೆ’, ‘ಎಲ್’, ‘ಎಂ’, ‘ಎನ್’, ‘ಜೆಡ್’ ವಿಭಾಗಗಳನ್ನು ಕ್ಲೇಮ್‌ ಮಾಡಿರುವ ಹಾಗೂ ರ‍್ಯಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್‌ ದಾಖಲಾತಿ ಪರಿಶೀಲನೆ ಜೂನ್ 25ರಿಂದ 29‌ರವರೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ನಡೆಯಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, ‘ಸಂಬಂಧಿಸಿದ ಅಭ್ಯರ್ಥಿಗಳು ಖುದ್ದು ಹಾಜರಾಗಬೇಕು. ‘ವೈ’ ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪಥಿ, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ ಕೋರ್ಸುಗಳು, ಬಿ.ಎಸ್‌ಸಿ (ಆನರ್ಸ್), ಕೃಷಿ, ಬಿ.ಎಸ್ಸಿ (ಆನರ್ಸ್) (ರೇಷ್ಮೆ ಕೃಷಿ) ಮುಂತಾದವು, ಬಿ.ಎಸ್ಸಿ (ನರ್ಸಿಂಗ್), ಬಿ.ಫಾರ್ಮಾ, ಎರಡನೇ ವರ್ಷದ ಬಿ ಫಾರ್ಮಾ ಮತ್ತು ಫಾರ್ಮಾ ಡಿ ಕೋರ್ಸುಗಳ ಪ್ರವೇಶಕ್ಕೆ ಇದು ಅನ್ವಯವಾಗುತ್ತದೆ.

‘ವಿದ್ಯಾರ್ಥಿಗಳ ರ‍್ಯಾಂಕ್‌ ಆಧರಿಸಿ, ಅವರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವೇಳಾಪಟ್ಟಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತಾ ಕಂಡಿಕೆಗೆ ಅನುಸಾರವಾಗಿ ಅಗತ್ಯ ಇರುವ ಮೂಲ ದಾಖಲೆಗಳೊಂದಿಗೆ ಹಾಗೂ ನಕಲು ಪ್ರತಿಯೊಂದಿಗೆ ಹಾಜರಾಗಬೇಕು’ ಎಂದೂ ತಿಳಿಸಿದ್ದಾರೆ.

‘ಅರ್ಹತಾ ಕಂಡಿಕೆ ‘ಎ’, ‘ಇ’, ‘ಎಫ್’, ‘ಜಿ’, ‘ಎಚ್‘, ‘ಒ’ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಈ ಕುರಿತು ಸದ್ಯದಲ್ಲಿಯೇ ಸೂಚನೆಗಳನ್ನು ಪ್ರಕಟಿಸಲಾಗುವುದು’ ಎಂದು ಪ್ರಸನ್ನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.