ADVERTISEMENT

ಇನ್ನು 3 ತಿಂಗಳು ರಜೆಯಲ್ಲೂ ಕೆಇಎ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 1:28 IST
Last Updated 1 ಜುಲೈ 2024, 1:28 IST
h prasanna
h prasanna   

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕ್ಲುಪ್ತ ಸಮಯದಲ್ಲಿ ಪೂರ್ಣಗೊಳಿಸಲು ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಮುಂದಿನ ಮೂರು ತಿಂಗಳು ಸರ್ಕಾರಿ ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸಲಿದೆ.

ಈ ಕುರಿತು ಎಲ್ಲ ಸಿಬ್ಬಂದಿಗೆ ಸೂಚನೆ ನೀಡಿರುವ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಹಬ್ಬದ ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ಹೇಳಿದ್ದಾರೆ.

‘ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವುದರ ಜೊತೆಗೆ, ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ನಡೆಸುತ್ತಿದೆ. ಸಿಇಟಿ ನಡೆಸಿ, ಅದರ ಫಲಿತಾಂಶದ ಆಧಾರದಲ್ಲಿ ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡುವುದು ಪ್ರಾಧಿಕಾರದ ಬಹುಮುಖ್ಯ ಜವಾಬ್ದಾರಿ.‌ ಈ ಪ್ರಕ್ರಿಯೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ಈ ತಿಂಗಳುಗಳಲ್ಲಿ ಸರ್ಕಾರಿ ರಜಾ ದಿನಗಳಲ್ಲಿಯೂ ಕೆಇಎ ಕಾರ್ಯನಿರ್ವಹಿಸದೇ ಇರುವುದರಿಂದ ನಿಗದಿತ ಸಮಯದಲ್ಲಿ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸಹಾಯವಾಗಲಿದೆ ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಪ್ರಸನ್ನ ತಿಳಿಸಿದ್ದಾರೆ.

ADVERTISEMENT

‘ಸರ್ಕಾರಿ ರಜೆಯ ದಿನ ಕೆಲಸ ಮಾಡಿದ ಸಿಬ್ಬಂದಿ, ಆ ರಜೆಯನ್ನು ಇತರೆ ದಿನ ಪಡೆಯಲು ಅವಕಾಶವಿದೆ. ಒಂದೊಮ್ಮೆ ರಜೆಯ ದಿನ ಕಾರ್ಯನಿರ್ವಹಿಸಿ, ಆ ರಜೆಯನ್ನು ಇತರ ದಿನಗಳಲ್ಲಿ ಪಡೆಯದೇ ಇದ್ದರೆ, ಅಂಥವರಿಗೆ ರಜೆ ದಿನ ಕಾರ್ಯನಿರ್ವಹಿಸಿದ್ದಕ್ಕೆ ಹೆಚ್ಚುವರಿ ವೇತನ ಪಾವತಿಸಲಾಗುವುದು.ರಜೆ ದಿನಗಳಲ್ಲಿಯೂ ತಮ್ಮ ವಿಭಾಗ ಮುಖ್ಯಸ್ಥರ ಅನುಮತಿ ಪಡೆದು ರಜೆ ಪಡೆಯಲು ಅವಕಾಶ ನೀಡಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಾಧಿಕಾರದಲ್ಲಿ ಮುಂದಿನ ಮೂರು ತಿಂಗಳು ಕಾರ್ಯಬಾಹುಳ್ಯವಿದೆ. ಈ ಕಾರಣಕ್ಕೆ ಸರ್ಕಾರಿ ರಜಾ ದಿನಗಳಲ್ಲಿಯೂ ಕೆಲಸ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ
–ಎಚ್‌. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.