ADVERTISEMENT

ಕನ್ನಡದ ಹೆಣ್ಣು ಹುಲಿ ಕೆಳದಿ ಚೆನ್ನಮ್ಮ

ಸತಿ ಸಹಗಮನ ವಿರೋಧಿಸಿದ್ದ ವೀರವನಿತೆ l ಪಟ್ಟಾಭಿಷೇಕದ 350ನೇ ವರ್ಷ

ವಚನಾನಂದ ಸ್ವಾಮೀಜಿ
Published 26 ಫೆಬ್ರುವರಿ 2022, 19:31 IST
Last Updated 26 ಫೆಬ್ರುವರಿ 2022, 19:31 IST
ಕೆಳದಿ ಚೆನ್ನಮ್ಮಾಜಿ
ಕೆಳದಿ ಚೆನ್ನಮ್ಮಾಜಿ   

ಆಕೆ ಕನ್ನಡದ ಹೆಣ್ಣುಹುಲಿ. ಕೆಳದಿಯ ರಾಣಿ ಚೆನ್ನಮ್ಮ. ಶತ್ರು ಪಾಳಯಕ್ಕೆ ಬೆಂಕಿಚೆಂಡಿನಂತಿದ್ದ, ವೀರಾಧಿವೀರರನ್ನೇ ಯುದ್ಧರಂಗದಲ್ಲಿ ಮಂಡಿ ಊರುವಂತೆ ಮಾಡಿದ, ಔರಂಗಜೇಬನಂಥ ಸುಲ್ತಾನನನ್ನೇ ಕಂಗಾಲಾಗುವಂತೆ ಮಾಡಿ ಪ್ರಾಣಭಿಕ್ಷೆ ನೀಡಿದ ವೀರವನಿತೆ.

ಕೆಳದಿಯ ರಾಣಿ ಚೆನ್ನಮ್ಮ 1672 ರಿಂದ 1697ರವರೆಗೆ 25 ವರ್ಷ ಆರು ತಿಂಗಳು ಕೆಳದಿಯನ್ನು ಆಳುತ್ತಾಳೆ. ಶತದಿಕ್ಕುಗಳಿಂದ ಶತ್ರುಗಳು ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ಇಕ್ಕೇರಿ ಸಂಸ್ಥಾನವನ್ನು ಸಂರಕ್ಷಿಸಿದ ರಣಚತುರೆ ಆಕೆ. ಚೆನ್ನಮ್ಮ (1647–1697) ಅವರ ಬಗ್ಗೆ ತಿಳಿಯಲು ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಮತ್ತು ಆ ಕಾಲಘಟ್ಟದ ಇತಿಹಾಸಕಾರರು ಬರೆದ ಗ್ರಂಥಗಳನ್ನು ಓದಬೇಕು.

ತಂದೆ ಕೋಟಿಪುರ ಸಿದ್ದಪ್ಪ ಮಗಳಿಗೆ ಬಾಲ್ಯದಲ್ಲಿಯೇ ಶಸ್ತ್ರಶಾಸ್ತ್ರ ವಿದ್ಯೆ ಕೊಡಿಸಿದ್ದರು. ಮುಂದೆ, ಸಾಮಾಜಿಕ ಹರಿಕಾರನೆಂದೇ ಹೇಳಬಹುದಾದ ಶಿವಪ್ಪನಾಯಕನ ಪುತ್ರ ಸೋಮಶೇಖರ ನಾಯಕನಿಗೆ, ಮಗಳನ್ನು ಕೊಟ್ಟು ಮದುವೆ ಮಾಡಲಾಗುತ್ತದೆ. ಶಿವಪ್ಪ ನಾಯಕ ರೂಪಿಸಿದ್ದ ಕಂದಾಯ ವ್ಯವಸ್ಥೆಯು ಅತ್ತುತ್ತಮವಾದುದಾಗಿದ್ದು, ‘ಸಿಸ್ತು’ ಎಂದೇ ಹೆಸರಾಗಿತ್ತು.

ADVERTISEMENT

ಸೋಮಶೇಖರ ನಾಯಕ ಧಾರ್ಮಿಕ ವ್ಯಕ್ತಿಯಾಗಿದ್ದ. ರೂಪವತಿ, ಚತುರೆಯೂ ಆದ ಚೆನ್ನಮ್ಮಳನ್ನು ಇಷ್ಟಪಟ್ಟು ಮದುವೆಯಾಗುತ್ತಾನೆ. ಚೆನ್ನಮ್ಮ, ಪತಿಯಿಂದ ಆಡಳಿತದ ಅನುಭವ ಪಡೆದುಕೊಳ್ಳುತ್ತಾಳೆ. ಸಕಾಲದಲ್ಲಿ ಪತಿಗೆ ಸಲಹೆ ಸೂಚನೆಗಳನ್ನು ನೀಡತೊಡಗುತ್ತಾಳೆ.

ಸೋಮಶೇಖರ ನಾಯಕನು ಲೋಲುಪನಾಗಿದ್ದ. ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದು ರಾಜ್ಯವನ್ನು ಕಡೆಗಣಿಸಿದ. ಇದು ರಾಣಿಗೆ ಚಿಂತೆ ಮೂಡಿಸಿತ್ತು. ಆಕೆಯ ಆತಂಕ ನಿಜವಾಯಿತು. ಬಿಜಾಪುರದ ಸುಲ್ತಾನನ ಕಣ್ಣು ಬಿದನೂರಿನ ಮೇಲೆ ಬೀಳುತ್ತದೆ. ಆತ ಸರ್ವಸನ್ನದ್ಧನಾಗಿ ಬಿದನೂರಿಗೆ ಮುತ್ತಿಗೆ ಹಾಕುತ್ತಾನೆ. ಮಂತ್ರಿಗಳು, ಸೇನಾ ನಾಯಕರು ಮಗುವೊಂದನ್ನು ದತ್ತು ಪಡೆದು ರಾಜ್ಯಭಾರ ಮಾಡಲು ಸಲಹೆ ಮಾಡುತ್ತಾರೆ. ಮಕ್ಕಳಿಲ್ಲದ ಚೆನ್ನಮ್ಮಳಿಗೆ ಈ ಸಲಹೆ ರುಚಿಸಲಿಲ್ಲ. ರಾಜ್ಯವನ್ನು ಕಾಪಾಡುವಂತೆ ಪತಿಯನ್ನು ಬೇಡಿಕೊಳ್ಳುತ್ತಾಳೆ. ಸೋಮಶೇಖರ ಕೈಚೆಲ್ಲುತ್ತಾನೆ. ಕಷ್ಟಕಾಲ ಅರಿತ ಕೆಳದಿ ಚೆನ್ನಮ್ಮ ಸಂಧಾನಕ್ಕೆ ಬಂದಿದ್ದ ಸುಲ್ತಾನನಿಗೆ ಮೂರು ಲಕ್ಷ ಕೊಟ್ಟು ತಕ್ಷಣಕ್ಕೆ ಯುದ್ಧ ನಿಲ್ಲಿಸುತ್ತಾಳೆ. ಆದರೆ ಸುಲ್ತಾನನ ದೂತ ಹಿಂದಿರುಗುವಾಗ ಸೋಮಶೇಖರನನ್ನು ಕೊಲ್ಲಿಸುತ್ತಾನೆ. ಬಿದನೂರಿಗೆ ಮುತ್ತಿಗೆಯನ್ನೂ ಹಾಕುತ್ತಾನೆ. ಹೆದರದ ಚೆನ್ನಮ್ಮ, ಹಿತೈಷಿಗಳಾಗಿದ್ದ ಗುರುಬಸಪ್ಪದೇವ, ದಂಡನಾಯಕರಾದ ಕೃಷ್ಣಪ್ಪಯ್ಯ, ತಿಮ್ಮರಸಯ್ಯ ಅವರ ನೆರವಿನಿಂದ ವೈರಿಗಳನ್ನು ಸದೆಬಡಿದು ಕೆಳದಿ ಸಂಸ್ಥಾನ ಉಳಿಸಿಕೊಳ್ಳುತ್ತಾಳೆ. ಫೆಬ್ರುವರಿ 27, 1672ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ.

ಕ್ರಾಂತಿಕಾರಿ ನಿಲುವು: ಚೆನ್ನಮ್ಮ ಅವರ ಕಾಲಕ್ಕೆ ಸತಿಸಹಗಮನ ಪದ್ಧತಿ ಉತ್ತುಂಗದಲ್ಲಿತ್ತು. ಪತಿ ಸಾವಿನಿಂದ ಚಿತೆ ಏರಬೇಕಾಗಿ ಬಂದಾಗ ಅದನ್ನು ವಿರೋಧಿಸುತ್ತಾಳೆ. ಆ ಕಾಲಕ್ಕೆ ಈ ಪ್ರತಿರೋಧ ಕ್ರಾಂತಿಕಾರಕವೇ ಸರಿ. ರಾಜಾರಾಮ ಮೋಹನರಾಯ ಅವರಿಗಿಂತ ನೂರು ವರ್ಷ ಮೊದಲೇ ಸತಿಸಹಗಮನದ ವಿರುದ್ಧ ದನಿ ಎತ್ತಿದ ದಿಟ್ಟೆ ಕೆಳದಿಯ ಚೆನ್ನಮ್ಮ.

ಕೆಳದಿಯ ರಾಣಿ ರಾಜಕೀಯ ಚತುರತೆಗೆ ಇನ್ನೊಂದು ನಿದರ್ಶನವಿದೆ. ಛತ್ರಪತಿ ಶಿವಾಜಿಯ ಮೊದಲ ಮಗ ಸಂಭಾಜಿ ಕೊಲೆಯಾಗುತ್ತದೆ. ಎರಡನೇ ಮಗ ರಾಜಾರಾಮನನ್ನು ಕೊಂದು ಮರಾಠಾ ಸಾಮ್ರಾಜ್ಯ ವಶಪಡಿಸಿಕೊಳ್ಳಲು ಔರಂಗಜೇಬ ಹವಣಿಸುತ್ತಾನೆ. ಹೆದರಿದ ರಾಜಾರಾಮ, ಸನ್ಯಾಸಿ ವೇಷ ತೊಟ್ಟು ರಕ್ಷಣೆ ಕೋರಿ ಚೆನ್ನಮ್ಮ ಬಳಿಗೆ ಬರುತ್ತಾನೆ. ರಾಣಿಯು, ಅಭಯ ನೀಡುತ್ತಾಳೆ. ಔರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಕಂಗೆಡದ ರಾಣಿ ಔರಂಗಜೇಬನ ಸೇನೆಯನ್ನು ಸದೆಬಡಿಯುತ್ತಾಳೆ. ಔರಂಗಜೇಬ ಮತ್ತು ಆತನ ಮಗ ಮೊಹಮ್ಮದ್‌ ಅಜಮ್‌ ಶಾ ಇಬ್ಬರೂ ಸೆರೆಯಾಳಾಗುತ್ತಾರೆ. ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಈ ಇಬ್ಬರನ್ನೂ ಕೊಂದು, ಮೊಗಲ್‌ ಸಾಮ್ರಾಜ್ಯವನ್ನು ಚೆನ್ನಮ್ಮ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ದೊಡ್ಡ ತನ ಮೆರೆದ ಚೆನ್ನಮ್ಮ ಇಬ್ಬರನ್ನೂ ಕ್ಷಮಿಸುತ್ತಾಳೆ.

ಚೆನ್ನಮ್ಮ ಧೈರ್ಯ, ಶೌರ್ಯದ ಜೊತೆಗೆ, ಧಾರ್ಮಿಕ ನಿಲುವಿಗೂ ಹೆಸರಾದವಳು. ಬಸವಾದಿ ಶರಣರ ವಚನ ಪಠಿಸುತ್ತಾ, ನಿತ್ಯ ಇಷ್ಟಲಿಂಗ ಧ್ಯಾನ ಮಾಡುತ್ತಿದ್ದಳು. ಶೃಂಗೇರಿ ಮಠಕ್ಕೆ ರಾಜಾಶ್ರಯ, ಅಗ್ರಹಾರ ಮತ್ತು ಜಂಗಮ ಮಠಗಳ ನಿರ್ಮಾಣ, ಎರಡು ಲಕ್ಷ ಜಂಗಮರಿಗೆ ದಾಸೋಹ ವ್ಯವಸ್ಥೆ, ಕೆರೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಳು. ಶೃಂಗೇರಿಗೆ ಚಿನ್ನದ ಗೋಪಾಲ ಕೃಷ್ಣ ಮತ್ತು ಸ್ಪಟಿಕ ಲಿಂಗ, ಕೊಲ್ಲೂರು ಮೂಕಾಂಬಿಕೆಗೆ ಪಚ್ಚೆ ಪದಕ, ಹೊರನಾಡು ಅನ್ನಪೂರ್ಣೆಗೆ ವಿಜಯ ದಶಮಿಯಂದು ವಿಶೇಷ ಪೂಜೆಗೆ ಪ್ರೋತ್ಸಾಹ ನೀಡಿದ್ದಳು. ಬಸಪ್ಪನೆಂಬ ದತ್ತುಪುತ್ರನನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿದಳು. ಮುಂದೆ ಆತ ಬಸಪ್ಪನಾಯಕನೆಂದೂ ಖ್ಯಾತಿ ಪಡೆದ. ಆತ ಬರೆದ ಗ್ರಂಥ ‘ಶಿವತತ್ವ ರತ್ನಾಕರ’ ಸಂಸ್ಕೃತದ ವಿಶ್ವಕೋಶ ಎಂದೇ ಖ್ಯಾತಿ ಪಡೆದಿದೆ.

ಆಡಳಿತದ ದಿಟ್ಟ ನಿರ್ಧಾರಗಳ ಮೂಲಕ ಗಮನಸೆಳೆದಿದ್ದ ವೀರವನಿತೆಯ ಪಟ್ಟಾಭಿಷೇಕವಾಗಿ ಇದು 350ನೇ ವರ್ಷ. ಆಕೆಯ ನೆನಪುಗಳನ್ನು ಉಳಿಸುವ, ಆಕೆಯ ಶೌರ್ಯವನ್ನು ವಿವರಿಸುವ ಕಥನಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆದ್ಯತೆ ಮೇಲೆ ಆಗಬೇಕಿದೆ.

ಲೇಖಕರು: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.