ADVERTISEMENT

ಕೋಲಾರ| ಕೆಂಪೇಗೌಡ ಜಯಂತಿ: ದೇವೇಗೌಡ, ಹೆಚ್‌ಡಿಕೆಗೆ ಆಹ್ವಾನ ನೀಡದಿದ್ದಕ್ಕೆ ಆಕ್ರೋಶ

ಒಕ್ಕಲಿಗರ ಜಯಂತಿ ಮೆರವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಗಳ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 8:15 IST
Last Updated 27 ಜೂನ್ 2024, 8:15 IST
   

ಕೋಲಾರ: ಕೆಂಪೇಗೌಡರ ಜಯಂತಿಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆಹ್ವಾನಿಸಿಲ್ಲ ಎಂಬ ವಿಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಗುರುವಾರ ಕೆಂಪೇಗೌಡರ ಸ್ಥಬ್ದಚಿತ್ರ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದರು.

ಇದರಿಂದಾಗಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮುಂದೆಯೇ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ ನಡೆಯಿತು. ಪರಸ್ಪರ ಹೊಡೆದಾಟಕ್ಕೂ ಮುಂದಾದರು. ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ತಡೆದರು.

ಕಾರ್ಯಕ್ರಮದ ವೇದಿಕೆ ಬಳಿ ಸೇರಿದ ಜೆಡಿಎಸ್‌ನ ಕೆಲ ಕಾರ್ಯಕರ್ತರು ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ಹೇಳುವಂತೆ ಸಂಘಟಕರ ಬಳಿ ಒತ್ತಾಯಿಸಿದರು. ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಧಿಕ್ಕಾರ ಕೂಗಿದರು‌.

ADVERTISEMENT

ಆಗ ವೇದಿಕೆಯಿಂದ ಮೇಲೆದ್ದು ಬಂದ ಕಾಂಗ್ರೆಸ್‌ನ ಎಂಎಲ್‌ಸಿ ಅನಿಲ್ ಕುಮಾರ್, 'ನೀವಿಲ್ಲಿ ರಾಜಕೀಯ ಮಾಡಲು ಬಂದಿದ್ದರೆ ನನಗೂ ರಾಜಕೀಯ ಮಾಡಲು ಬರುತ್ತದೆ. ನೋಡ್ತೀರಾ' ಎಂದು ಜೆಡಿಎಸ್ ಮುಖಂಡರಿಗೆ ಅವಾಜ್ ಹಾಕಿದರು.

ಆಗ ಅನಿಲ್ ಕುಮಾರ್ ಅವರತ್ತ ಕೈತೋರಿಸಿ ಜೆಡಿಎಸ್ ಮುಖಂಡರು ಜೋರಾಗಿ ಕೂಗಿದರು.

ಆಗ ಕಾಂಗ್ರೆಸ್ ಯುವ ಮುಖಂಡ ಜನಪನಹಳ್ಳಿ ನವೀನ್ ಕುಮಾರ್ ಹೊಡೆದಾಟಕ್ಕೆ ಮುಂದಾದರು.

ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ಚಿಕ್ಕಬಳ್ಳಾಪುರದ ಮಂಗಳಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

'ಜಯಂತಿಯಲ್ಲಿ ಗೊಂದಲ ಮಾಡಿಕೊಂಡರೆ ಕೆಂಪೇಗೌಡರಿಗೆ ಅಗೌರವ ತೋರಿದಂತೆ. ಸಣ್ಣಪುಟ್ಟ ಸಮಸ್ಯೆಯನ್ನು ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ದೇವೇಗೌಡ ಹಾಗೂ ಕುಮಾರಣ್ಣ ಕೊಡುಗೆ ಅಪಾರ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.