ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಎರಡು ಕಂಪನಿಗಳಿಗೆ ಹೆಚ್ಚುವರಿಯಾಗಿ
₹ 40 ಕೋಟಿ ಬಿಡುಗಡೆ ಮಾಡಿರು ವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.
ನಿವೇಶನಗಳ ರಚನೆ, ರಸ್ತೆಗಳು, ಚರಂಡಿಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೇಔಟ್‌ನಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಹಾಗೂ ಲೆಕ್ಕಪರಿಶೋಧನೆಯ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ (ಥರ್ಡ್ ಪಾರ್ಟಿ) ನೀಡಲಾಗಿತ್ತು. ‘ಅಲ್ಕಾನ್ ಕನ್ಸಲ್ಟಿಂಗ್’ ಎಂಜಿನಿಯರ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು.
ನಿರ್ಮಾಣ ಕಾಮಗಾರಿಗಳಿಗೆ ಮಾಡುವ ವೆಚ್ಚ ಹಾಗೂ ಪಾವತಿಗಳಲ್ಲಿನ ದೋಷಪೂರಿತ ವ್ಯವಸ್ಥೆಯನ್ನು ಸಂಸ್ಥೆ ಪತ್ತೆ ಮಾಡಿದ್ದು, ಇಂತಹ ಲೋಪಗಳಿಂದಾಗಿ ಲೇಔಟ್ ನಿರ್ಮಾಣ ಕಾರ್ಯಗಳ ವೇಗ ಹಾಗೂ ಕಾಮಗಾರಿಗಳ ಪೂರ್ಣಗೊಳಿಸುವಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
26 ಸಾವಿರ ನಿವೇಶನಗಳನ್ನು ಒಳಗೊಂಡ ಅಂದಾಜು ₹1,300 ಕೋಟಿ ವೆಚ್ಚದ ಬಡಾವಣೆ ನಿರ್ಮಿಸಲು ‘ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ’ (ಆರ್‌ಸಿಸಿ) ಹಾಗೂ ‘ಕೆಎಂಸಿ ಕನ್‌ಸ್ಟ್ರಕ್ಷನ್’ಕಂಪನಿಗಳಿಗೆ 2014ರಲ್ಲಿ ಗುತ್ತಿಗೆ ನೀಡಲಾಗಿತ್ತು. ಐದು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿತ್ತು. ನಿಗದಿತ ಗಡುವಿನ ಒಳಗೆ ಕಾಮಗಾರಿ ಪೂರ್ಣ
ಗೊಳಿಸಲು ಆಸಕ್ತಿ ತೋರಿಲ್ಲ. 9 ವರ್ಷಗಳ ಸುದೀರ್ಘ ಅವಧಿಯಲ್ಲಿ ಶೇ 60ರಷ್ಟು ಕಾಮಗಾರಿಗಳು ಮಾತ್ರ ಮುಗಿದಿವೆ. ಆದರೂ, ಎರಡು ವರ್ಷಗಳಿಂದ ಸಂಸ್ಥೆಗಳಿಗೆ ಹೆಚ್ಚುವರಿ ಹಣ ಪಾವತಿ ಮಾಡಲಾಗಿದೆ.
ನಿರ್ದಿಷ್ಟ ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಹೆಚ್ಚುವರಿ ಹಣವನ್ನು ಸಂಸ್ಥೆಗಳು ಪಡೆದಿರುವ ಕಾರಣ, ಒಪ್ಪಂದದಂತೆ ನಿಗದಿತ ಅವಧಿಯ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಸ್ಥೆಗಳು ಬದ್ಧತೆ ತೋರುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
‘ಗುತ್ತಿಗೆದಾರರಿಗೆ ಹೆಚ್ಚುವರಿ ಮೊತ್ತ ಪಾವತಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಯೋಜನಾ ನಿರ್ವಹಣಾ ಸಲಹೆಗಾರ ಹಾಗೂ ಗುತ್ತಿಗೆದಾರರಿಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ. ಮುಂದಿನ ಪಾವತಿಗಳಲ್ಲಿ ವ್ಯತ್ಯಾಸ ಸರಿದೂಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಎಚ್.ಆರ್. ಶಾಂತರಾಜಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಇಂತಹ ಪ್ರಕರಣಗಳಿಂದಾಗಿಬಡಾವಣೆಯ ಕಾಮಗಾರಿ ಮತ್ತಷ್ಟು ವಿಳಂಬವಾಗಬಹುದು. ಕೆಲ ತಿಂಗಳಿನಿಂದ ನಿರ್ಮಾಣ ಚಟುವಟಿಕೆಗಳುಸ್ಥಗಿತವಾಗಿವೆ. ನೀರು ಪೂರೈಕೆ, ಯುಜಿಡಿ, ಚರಂಡಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿವೆ. ಬಿಡಿಎ ಲೇಔಟ್ ನಿರ್ಮಾಣ ಪೂರ್ಣಗೊಳಿಸಲು ಹೆಚ್ಚು ಗಮನಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯ ಕಿರಣ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.