ಬೆಂಗಳೂರು: ಕೇರಳದ ವಯನಾಡು ಜಿಲ್ಲೆ ಬೇಗೂರಿನ ಚತಿಗಡದಲ್ಲಿ ಆನೆ ತುಳಿತಕ್ಕೆ ಒಳಗಾಗಿ ಅಜೀಶ್ ಎಂಬವರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ವಯನಾಡ್‌ನಲ್ಲಿ ಸ್ಥಳೀಯರಿಂದ ಭಾರಿ ಪ್ರತಿಭಟನೆ ನಡೆದಿತ್ತು. ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಅವರೂ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಇದರ ಬೆನ್ನಲ್ಲೇ ಪರಿಹಾರ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.
‘ಅಜೀಶ್ ಸಾವಿನ ಕಾರಣಕ್ಕೆ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳದ ಜನಪ್ರತಿನಿಧಿಗಳು ಮತ್ತು ಅಲ್ಲಿನ ಸರ್ಕಾರವು ಕರ್ನಾಟಕ ಸರ್ಕಾರವನ್ನು ಕೋರಿತ್ತು. ಈ ಕುರಿತು ಮುಖ್ಯಮಂತ್ರಿಯವರ ಜತೆ ಮಾತನಾಡಿದ್ದು, ಪರಿಹಾರ ನೀಡಲು ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ದಂತರಹಿತ ಗಂಡು ಆನೆಯನ್ನು ಕಳೆದ ವರ್ಷದ ನವೆಂಬರ್ 30ರಂದು ಸೆರೆ ಹಿಡಿಯಲಾಗಿತ್ತು. ನಂತರ ಈ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಈ ಆನೆಯು ಸುಮಾರು ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಫೆಬ್ರುವರಿ 10ರ ಬೆಳಿಗ್ಗೆ ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಈ ಆನೆಯೊಂದಿಗೆ ಸಂಘರ್ಷದ ಘಟನೆಯಲ್ಲಿ ಅಜೀಶ್ ಪ್ರಾಣ ಕಳೆದುಕೊಂಡರು’ ಎಂದು ಖಂಡ್ರೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.