ಮಂಡ್ಯ: ಕೇರಳದ ಭೀಕರ ಪ್ರವಾಹ ವಿದ್ಯಾರ್ಥಿಗಳ ಓದಿನ ಮೇಲೂ ಪರಿಣಾಮ ಬೀರಿದೆ. ಅಲ್ಲಿನ ವಿದ್ಯಾರ್ಥಿಗಳನ್ನೇ ನೆಚ್ಚಿಕೊಂಡಿದ್ದ ರಾಜ್ಯದ ವೃತ್ತಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಕೊರತೆ ಎದುರಿಸುತ್ತಿವೆ.
ನರ್ಸಿಂಗ್, ಔಷಧ ವಿಜ್ಞಾನ, ಕಾನೂನು, ಬಿ.ಇಡಿ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ರಾಜ್ಯಕ್ಕೆ ಬರುತ್ತಿದ್ದರು. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಕೇರಳದ ಪ್ರಮುಖ ನಗರಗಳಲ್ಲಿ ಕ್ಯಾಂಪ್ ಮಾಡಿ ದಾಖಲು ಮಾಡಿಕೊಳ್ಳುತ್ತಿದ್ದರು. ಸ್ಥಳೀಯ ಮಾಧ್ಯಮಗಳಲ್ಲಿ ಜಾಹೀರಾತು ಕೊಟ್ಟು ಸೆಳೆಯುತ್ತಿದ್ದರು. ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವವರು ರಾಜ್ಯಕ್ಕೆ ಬಂದು ಓದಲು ಆಸಕ್ತಿ ತೋರುತ್ತಿಲ್ಲ. ದಾಖಲಾತಿ ಸಲುವಾಗಿ ಕೇರಳದ ಹೋಟೆಲ್‌ಗಳಲ್ಲಿ ಬೀಡುಬಿಟ್ಟಿದ್ದ ಕಾಲೇಜು ಸಿಬ್ಬಂದಿ ಬರಿಗೈಲಿ ವಾಪಸ್ ಬಂದಿದ್ದಾರೆ.
‘ರಾಜ್ಯದ ನರ್ಸಿಂಗ್ ಕಾಲೇಜುಗಳಿಗೆ ಶೇ 70ರಷ್ಟು ಮಂದಿ ಕೇರಳದಿಂದ ಬರುತ್ತಾರೆ. ಅಲ್ಲಿನ ವಿದ್ಯಾರ್ಥಿಗಳಿಲ್ಲದೆ ಕಾಲೇಜು ನಡೆಸುವುದು ಕಷ್ಟ. ದಾಖಲಾತಿ ಸಮಯದಲ್ಲೇ ಪ್ರವಾಹ ಬಂದಿದೆ. ಸೆ. 1ರಿಂದ ತರಗತಿ ಆರಂಭವಾಗಬೇಕು. ಆದರೆ ಇನ್ನೂ ದಾಖಲಾತಿ ಸಂಖ್ಯೆ 10 ಮೀರಿಲ್ಲ’ ಎಂದು ನಗರದ ನ್ಯೂ ನವೋದಯ ನರ್ಸಿಂಗ್ ಕಾಲೇಜು ಪ್ರಾಚಾರ್ಯ ಮಹೇಶ್ ಲೋನಿ ಹೇಳಿದರು.
ನರ್ಸಿಂಗ್ ಕಾಲೇಜುಗಳು ಹೆಚ್ಚು ದಾಖಲಾತಿ ಕೊರತೆ ಎದುರಿಸುತ್ತಿವೆ. ಡಿ.ಫಾರ್ಮ, ಬಿ.ಫಾರ್ಮ ತರಗತಿ ಆರಂಭವಾಗಿದ್ದು ದಾಖಲಾಗಿದ್ದವರೂ ಕಾಲೇಜಿಗೆ ಬರುತ್ತಿಲ್ಲ. ವಿದ್ಯಾರ್ಥಿನಿಲಯಗಳಲ್ಲೇ ಉಳಿದವರು ಸಮಸ್ಯೆಯಿಂದ ಪಾರಾಗಿದ್ದಾರೆ.
ಸಂಪರ್ಕಕ್ಕೆ ಸಿಗದ ವಿದ್ಯಾರ್ಥಿಗಳು: ಮಂಡ್ಯ, ಮೈಸೂರು, ಬೆಂಗಳೂರು ಹಾಗೂ ಇತರ ನಗರಗಳ ಖಾಸಗಿ ಕಾನೂನು ಕಾಲೇಜುಗಳಲ್ಲಿ ಶೇ 50ರಷ್ಟು ಕೇರಳ ವಿದ್ಯಾರ್ಥಿಗಳಿದ್ದಾರೆ. ಪ್ರಥಮ ವರ್ಷದ ಎಲ್‌ಎಲ್‌ಬಿ ಪ್ರವೇಶ ಪ್ರಕ್ರಿಯೆ ಆ. 8ರಂದು ಮುಗಿದಿದೆ. ದಂಡ ಸಮೇತ ದಾಖಲಾತಿಗೆ ಆ. 31ರ ವರೆಗೆ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೂ ದಾಖಲಾಗಿಲ್ಲ. ಕೆಲವು ವಿದ್ಯಾರ್ಥಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪಿಇಎಸ್ ಕಾನೂನು ಕಾಲೇಜು ಪ್ರಾಚಾರ್ಯ ಡಾ.ಜೆ.ಯೋಗೇಶ್ ಹೇಳಿದರು.
‘ಪ್ರಥಮ ವರ್ಷದ ದಾಖಲಾತಿ ಕುಸಿದಿದೆ. ಜತೆಗೆ ಈಗಾಗಲೇ ಓದುತ್ತಿರುವ ಕೇರಳ ವಿದ್ಯಾರ್ಥಿಗಳು 2, 3ನೇ ವರ್ಷಕ್ಕೆ ದಾಖಲಾಗಿಲ್ಲ. ಸಂಪರ್ಕಿಸಲು ಕರೆ ಮಾಡುತ್ತಿದ್ದೇವೆ. ಆದರೆ ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರವಾಹದಿಂದ ಅವರ ಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲಿ 40 ಖಾಸಗಿ ಕಾನೂನು ಕಾಲೇಜುಗಳಿದ್ದು ಕೇರಳ ವಿದ್ಯಾರ್ಥಿಗಳು ಬಾರದಿದ್ದರೆ ಕಾಲೇಜುಗಳನ್ನು ನಡೆಸುವುದು ಕಷ್ಟ’ ಎಂದರು.
ಮುಖ್ಯಾಂಶಗಳು
* ಸಂಪರ್ಕಕ್ಕೂ ಸಿಗದ ಕೇರಳ ವಿದ್ಯಾರ್ಥಿಗಳು
* ವಿದ್ಯಾರ್ಥಿ ನಿಲಯಗಳಲ್ಲಿ ಇದ್ದವರು ಅಪಾಯದಿಂದ ಪಾರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.