ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎ.ರಾಧಾದೇವಿ ಅವರನ್ನು ಇದೇ ತಿಂಗಳು ಎರಡು ಬಾರಿ ವರ್ಗಾವಣೆ ಮಾಡಿದ್ದರೂ ಆ ಹುದ್ದೆ ಬಿಟ್ಟು ಕದಲದ ಅವರು, ಮೂರನೇ ಆದೇಶದ ಮೂಲಕ ಹೆಚ್ಚುವರಿಯಾಗಿ ಅದೇ ಹುದ್ದೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಧಾದೇವಿ ಅವರನ್ನು ಇದೇ 6ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಪಿಸಿಸಿಎಫ್ (ಇಡಬ್ಲ್ಯುಪಿಆರ್‌ಟಿಸಿ ಅಂಡ್ ಸಿಸಿ), ಬೆಂಗಳೂರು ಈ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಹುದ್ದೆ ಬಿಟ್ಟು ಕದಲಲಿಲ್ಲ.
ಆ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಇದೇ 25ರಂದು ಅವರನ್ನು ಪಿಸಿಸಿಎಫ್ ಆಗಿ ಕ್ಯಾಂಪಾ ವರ್ಗಾವಣೆ ಮಾಡಲಾಯಿತು. ಆಗಲೂ ಅವರು ಆ ಹುದ್ದೆ ಬಿಟ್ಟು ಹೋಗಲಿಲ್ಲ. ಬುಧವಾರ (ಜುಲೈ 31ಕ್ಕೆ) ಹೊಸ ಆದೇಶ ಪಡೆದ ಅವರು ಕ್ಯಾಂಪಾ ಜತೆಗೆ ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಯನ್ನೂ ಹೆಚ್ಚುವರಿಯಾಗಿ ಪಡೆದಿದ್ದಾರೆ.
ರಬ್ಬರ್ ವಿಭಾಗ ದಿವಾಳಿ ಅಂಚಿಗೆ:
‘ನಿಗಮದ ರಬ್ಬರ್ ವಿಭಾಗವನ್ನು ರಾಧಾದೇವಿ ದಿವಾಳಿ ಅಂಚಿಗೆ ಒಯ್ದಿದ್ದಾರೆ. ಅಲ್ಲದೇ, ಟೆಂಡರ್, ರಬ್ಬರ್ ಉತ್ಪನ್ನಗಳ ಮಾರಾಟ, ಖರೀದಿ, ಕಾಮಗಾರಿಗಳಿಗೆ ವರದಿ ಸಲ್ಲಿಸುವುದು, ಶಿಫಾರಸು, ಮಂಜೂರಾತಿ ಈ ಎಲ್ಲ ಕಾರ್ಯವನ್ನು ಏಕಾಂಗಿಯಾಗಿಯೇ ನಿರ್ವಹಿಸುತ್ತಿದ್ದಾರೆ. ತಮ್ಮ ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡಿ ಬಿಟ್ಟು ಹೋಗುವಂತೆ ಮಾಡುತ್ತಿದ್ದಾರೆ. ಎಲ್ಲ ಹಂತಗಳಲ್ಲೂ ಅವ್ಯವಹಾರ, ಕಳಪೆ ಕಾಮಗಾರಿ, ಅಧಿಕ ಬೆಲೆಗೆ ಕಳಪೆ ಗುಣಮಟ್ಟದ ವಸ್ತುಗಳ ಖರೀದಿ ಮಾಡಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮೂರು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡಿದೆ.
‘ಕಳೆದ 2 ವರ್ಷಗಳಿಂದ ರಬ್ಬರ್ ಮರಗಳ ಬುಡಕ್ಕೆ ರಸಗೊಬ್ಬರ ಹಾಕದ ಕಾರಣ ನಿಗಮವೇ ನಿಗದಿಪಡಿಸಿದ್ದ ಇಳುವರಿಗಿಂತ 500 ಮೆಟ್ರಿಕ್ ಟನ್ ಇಳುವರಿ ಕಡಿಮೆ ಆಗಿದೆ. ಇದರ ಪರಿಣಾಮ ₹5 ಕೋಟಿಯಿಂದ ₹7 ಕೋಟಿಗಳಷ್ಟು ನಷ್ಟವಾಗಿದೆ. ಅಲ್ಲದೇ, ಮಿಲ್ಲಿಂಗ್ ಮಶೀನ್ ಮುಂತಾದ ಉಪಕರಣಗಳನ್ನು ಕಳೆದ ಒಂದು ವರ್ಷದಿಂದ ದುರಸ್ತಿ ಮಾಡಿರಲಿಲ್ಲ. ಇದರಿಂದ ಕಚ್ಚಾ ರಬ್ಬರನ್ನು ಸಂಸ್ಕರಣೆಗೆ ಒಳಪಡಿಸದೇ ಹಾಗೆಯೇ ಮಾರಾಟ ಮಾಡುತ್ತಿರುವುದರಿಂದಲೂ ನಷ್ಟ ಉಂಟಾಗುತ್ತಿದೆ’ ಎಂದೂ ಆರೋಪಿಸಿದೆ.
‘ಸಂಸ್ಕರಿಸಿದ ರಬ್ಬರ್ ಹಾಲು ಮತ್ತು ಕಚ್ಚಾ ಸ್ಕ್ರ್ಯಾಪ್ ರಬ್ಬರನ್ನು ಮಾರುಕಟ್ಟೆಯ ಆಯಾ ದಿನದ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದರಿಂದ ನಿಗಮವು ತೀವ್ರ ನಷ್ಟದ ಹಾದಿಯಲ್ಲಿ ಸಾಗಲು ಕಾರಣವಾಗಿದೆ. ಉದಾಹರಣೆಗೆ ಮಾರುಕಟ್ಟೆ ದರ ₹120 ಇದ್ದರೂ ₹50ರಿಂದ ₹60 ನಂತೆ ನೂರಾರು ಟನ್ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದ್ದು, ಇದರಿಂದ ನಿಗಮಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ’ ಎಂದು ಹೇಳಿದೆ.
ಸುಳ್ಯದ ತೋಟ ತೊಳಿಲಾಲರ್ ಸಂಘ, ಜನರಲ್ ಎಂಪ್ಲಾಯೀಸ್ ಯೂನಿಯನ್ ಮತ್ತು ಕರ್ನಾಟಕ ಪ್ಲಾಂಟೇಷನ್ ಆ್ಯಂಡ್ ಇಂಡಸ್ಟ್ರಿಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ ‘ಕಾರ್ಮಿಕ ಸಂಘಗಳ ಜಂಟಿ ಸಮಿತಿ’ಯ ಅಂಗ ಸಂಘಟನೆಗಳಾಗಿವೆ. ‘ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ‘ಕಾರ್ಮಿಕ ಸಂಘಗಳ ಜಂಟಿ ಸಮಿತಿ’ಯ ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಕಳಪೆ ವಸತಿ ಗೃಹ: ಜೀವಭಯದಲ್ಲಿ ಕಾರ್ಮಿಕರು
ರಬ್ಬರ್ ತೋಟಗಳ ಕಾರ್ಮಿಕರ ವಾಸ್ತವ್ಯಕ್ಕೆ ಹಂಚಿಕೆಯಾದ ವಸತಿಗಳು ರಿಪೇರಿ ಮಾಡದ ಕಾರಣ ಛಾವಣಿ ಮತ್ತು ಗೋಡೆಗಳು ಕುಸಿಯುವ ಹಂತದಲ್ಲಿವೆ. ಕಾರ್ಮಿಕ ಕುಟುಂಬಗಳು ಜೀವಭಯದಲ್ಲೇ ಜೀವನ ನಡೆಸಬೇಕಾಗಿದೆ ಎಂದು ಸಮಿತಿ ಹೇಳಿದೆ.
ನಿಗಮದಲ್ಲಿ ₹100 ಕೋಟಿಗೂ ಅಧಿಕ ಮೊತ್ತವನ್ನು ನಿಶ್ಚಿತ ಠೇವಣೆಯಲ್ಲಿ ಇರಿಸಲಾಗಿದೆ. ಶೇ 20ರಷ್ಟು ಬೋನಸ್ ನೀಡುವಂತೆ ಕಾರ್ಮಿಕ ಸಂಘಗಳು ಕೋರಿಕೆ ಸಲ್ಲಿಸಲಾಗಿದೆ. ನಿಗಮವು ನಷ್ಟದಲ್ಲಿದೆ ಬೋನಸ್ ನೀಡಲು ಸಾಧ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕಿ ಅರಣ್ಯ ಸಚಿವರ ಮೂಲಕ ವಿಧಾನಮಂಡಲದಲ್ಲಿ ತಪ್ಪು ಉತ್ತರ ಕೊಡಿಸಿದ್ದಾರೆ ಎಂದು ಸಮಿತಿ ದೂರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.