ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ(ಡಿ.21)ಕ್ಕೆ ಚಿತ್ರ ಬಿಡುಗಡೆ ಸಕಲ ಸಿದ್ಧತೆಯಾಗಿದ್ದು, ಕಾನೂನು ತೊಡಕಿನಿಂದ ಗೊಂದಲ ಸೃಷ್ಟಿಯಾಗಿದೆ.
ರಾಜೇಶ್ವರಿ ಕಂಬೈನ್ಸ್ ಮಾಲೀಕರಾದ ವೆಂಕಟೇಶ್.ಜಿ, ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ಮತ್ತು ಆರ್ಯಾ ಫಿಲಂಸ್ನ ಆರ್.ಲಕ್ಷ್ಮೀನಾರಾಯಣ ವಿರುದ್ಧ ಅಸಲು ದಾವೆ ಹೂಡಿದ್ದರು. ಈ ಸಂಬಂಧ ಮಧ್ಯಂತರ ತಡೆಯಾಜ್ಞೆ ನೀಡಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದಾರೆ ಎನ್ನಲಾಗಿದೆ.
ರೌಡಿ ತಂಗಂ ಜೀವನ ಆಧರಿಸಿದ ಕಥೆಯನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದುವೆಂಕಟೇಶ್ ಆರೋಪಿಸಿದ್ದಾರೆ.
ದೊರೆತಿರುವ ವಕೀಲರ ಪತ್ರದ ಪ್ರತಿಯಲ್ಲಿರುವಂತೆ ಈ ಸಿನಿಮಾವನ್ನು ಯಾವುದೇ ರೀತಿಯಲ್ಲಿ ಬಿಡುಗಡೆ ಮಾಡುವುದು, ವಿತರಣೆ, ಪ್ರಚಾರ ಮಾಡುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆ.
ಜಗತ್ತಿನಾದ್ಯಂತ ಸುಮಾರು 2 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆ ಸಜ್ಜಾಗಿರುವ ಕೆಜಿಎಫ್ ಸಿನಿಮಾ ವೀಕ್ಷಣೆಗೆ ಸಿನಿಮಾ ಪ್ರಿಯರು ಆನ್‌ಲೈನ್ ಮುಖೇನ ಬುಕ್ಕಿಂಗ್ ಮಾಡಿದ್ದಾರೆ. ಶುಕ್ರವಾರದ ಪ್ರದರ್ಶನಗಳಿಗೆ ಬಹುತೇಕ ಎಲ್ಲ ಚಿತ್ರಮಂದಿರಗಳು ಭರ್ತಿಯಾಗಿದ್ದು, ಶನಿವಾರ ಮತ್ತು ಭಾನುವಾರದ ಪ್ರದರ್ಶನಗಳಿಗೂ ಬಹಳಷ್ಟು ಜನರು ಆಸನಗಳನ್ನು ಕಾಯ್ದಿರಿಸಿದ್ದಾರೆ.
* ರೌಡಿ ತಂಗಂ ಜೀವನಕ್ಕೂ, ಕೆಜಿಎಫ್ ಸಿನಿಮಾಗೂ ಯಾವ ಸಂಬಂಧವೂ ಇಲ್ಲ. ನಮಗೆ ಯಾವುದೇ ನೋಟಿಸ್ಬಂದಿಲ್ಲ. ನಾಳೆ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತದೆ
- ವಿಜಯ ಕಿರಗಂದೂರು, ನಿರ್ಮಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.