ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತಿ ತಾಲ್ಲೂಕು ಕೇಂದ್ರದಲ್ಲೂ ಹೊಸದಾಗಿ ಸಹಾಯಕ ನಿರ್ದೇಶಕರ ಹುದ್ದೆ ಸೃಷ್ಟಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪ್ರಸ್ತುತ ತಾಲ್ಲೂಕು ವ್ಯಾಪ್ತಿಯಲ್ಲಿನ ಪಡಿತರದ ಉಸ್ತುವಾರಿಯನ್ನು ಆಯಾ ತಾಲ್ಲೂಕು ಕಚೇರಿಗಳ ಉಪ ತಹಶೀಲ್ದಾರ್ ಅವರು ನಿರ್ವಹಿಸುತ್ತಿದ್ದಾರೆ. ಆ ಹೊಣೆಗಾರಿಕೆಯನ್ನು ಇನ್ನು ಮುಂದೆ ಹೊಸದಾಗಿ ನೇಮಕವಾಗುವ ಸಹಾಯಕ ನಿರ್ದೇಶಕರು ನಿರ್ವಹಿಸಲಿದ್ದಾರೆ. ಹಾಗೆಯೇ, ಇಲಾಖೆಯಲ್ಲಿ ಖಾಲಿ ಇರುವ 2,181 ಹುದ್ದೆಗಳ ಭರ್ತಿಗೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಡಿತರ ಸಂಗ್ರಹಕ್ಕೆ ಕೆಲವೆಡೆ ಪ್ರಸ್ತುತ ಎಪಿಎಂಸಿ ಹಾಗೂ ಗೋದಾಮುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಲಾಖೆಯಿಂದಲೇ ಹೆಚ್ಚುವರಿ ಗೋದಾಮುಗಳನ್ನು ನಿರ್ಮಾಣ ಮಾಡಲಾಗುವುದು. ಗೋದಾಮುಗಳ ಸಂಖ್ಯೆ, ತಗುಲುವ ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಸದ್ಯ ಬಜೆಟ್‌ನಲ್ಲಿ ಇಲಾಖೆಗೆ ನೀಡಿರುವ ₹35 ಸಾವಿರ ಕೋಟಿ ಅನುದಾನದಲ್ಲೇ ವೆಚ್ಚ ನಿಭಾಯಿಸಲಾಗುವುದು ಎಂದರು.
‘ಅಕ್ಕಿ ಬದಲಿಗೆ ರಾಗಿ, ಜೋಳಕ್ಕೆ ಬೇಡಿಕೆ ಇದೆ. ಎಷ್ಟು ಬೇಡಿಕೆ ಇದೆ ಎಂದು ಲೆಕ್ಕಹಾಕಲಾಗುತ್ತಿದೆ. ಪ್ರಸ್ತುತ 4 ಲಕ್ಷ ಟನ್ ರಾಗಿ, 1 ಲಕ್ಷ ಟನ್ ಜೋಳ ನೀಡುತ್ತಿದ್ದೇವೆ. 8 ಲಕ್ಷ ಟನ್ ರಾಗಿ, 3 ಲಕ್ಷ ಟನ್ ಜೋಳ ಹೆಚ್ಚುವರಿ ಖರೀದಿಸಲು ನಿರ್ಧರಿಸಿದ್ದೇವೆ. ಸಮರ್ಪಕ ವಿತರಣೆಯ ಮೇಲೆ ನಿಗಾ ವಹಿಸಲು ಪಡಿತರ ಚೀಟಿದಾರರನ್ನೇ ಒಳಗೊಂಡ ಸಮಿತಿಗಳನ್ನು ರಚಿಸಲಾಗುತ್ತದೆ’ ಎಂದು ವಿವರ ನೀಡಿದರು.
ಪ್ರಸ್ತುತ ತಿಂಗಳೂ ಐದು ಕೆ.ಜಿ.ಬದಲಿಗೆ ನಗದು ಖಾತೆಗೆ ಜಮೆ ಮಾಡಲಾಗುವುದು. ಬೇರೆ ರಾಜ್ಯಗಳ ಜತೆ ಅಕ್ಕಿ ಖರೀದಿ ಒಪ್ಪಂದದ ಪ್ರಕ್ರಿಯೆ ನಡೆಯುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಅಕ್ಕಿ ನೀಡಲು ಮುಂದೆ ಬಂದಿವೆ. ಒಂದು ಕೋಟಿ ಪಡಿತರದಾರರಿಗೆ ಕಳೆದ ತಿಂಗಳ ಹಣ ವರ್ಗಾವಣೆಯಾಗಿದೆ. 21 ಲಕ್ಷ ಪಡಿತರದಾರರಿಗೆ ಖಾತೆ ಇರಲಿಲ್ಲ. ಅವರಲ್ಲಿ 7 ಲಕ್ಷ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.