ADVERTISEMENT

ಧ್ವಜಸಂಹಿತೆ ತಿದ್ದುಪಡಿ ಪ್ರತಿಭಟಿಸಿ ಧ್ವಜ ಸತ್ಯಾಗ್ರಹ: ರಂಗಕರ್ಮಿ ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 19:30 IST
Last Updated 3 ಜುಲೈ 2022, 19:30 IST
‘ಮೈಸೂರು ಖಾದಿ ನೂಲುಗಾರರ ಬಳಗ’ವು ಮೈಸೂರಿನಲ್ಲಿ ನೂಲು ತೆಗೆಯುವ ಶಿಬಿರದಲ್ಲಿ ‍ಬಾಲಕನೊಬ್ಬ ನೂಲು ತೆಗೆದ. ಕಲಾವಿದ ಕೆ.ಜೆ. ಸಚ್ಚಿದಾನಂದ ಇದ್ದಾರೆ
‘ಮೈಸೂರು ಖಾದಿ ನೂಲುಗಾರರ ಬಳಗ’ವು ಮೈಸೂರಿನಲ್ಲಿ ನೂಲು ತೆಗೆಯುವ ಶಿಬಿರದಲ್ಲಿ ‍ಬಾಲಕನೊಬ್ಬ ನೂಲು ತೆಗೆದ. ಕಲಾವಿದ ಕೆ.ಜೆ. ಸಚ್ಚಿದಾನಂದ ಇದ್ದಾರೆ   

ಮೈಸೂರು: ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ‘ಮೈಸೂರು ಖಾದಿ ನೂಲುಗಾರರ ಬಳಗ’ವು ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೇಯುವ ಕಾರ್ಯಾಗಾರ ನಡೆಸಿ ಭಾನುವಾರ ಮೌನ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೃಷ್ಣಬುಲೇವಾರ್ಡ್‌ನಲ್ಲಿರುವ ‘ಪ್ರಕೃತಿ ಆಹಾರ’ ಮನೆಯಲ್ಲಿ ಕೆಲವು ಮಕ್ಕಳು ಹಾಗೂ ಖಾದಿಪ್ರಿಯರು ಚರಕ ಹಾಗೂ ನೂಲುವ ಪೆಟ್ಟಿಗೆಗಳಲ್ಲಿ ದಾರವನ್ನು ತೆಗೆದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ ’ ಎಂದು ಬಳಗಕ್ಕೆ ಬೆಂಬಲ ನೀಡಿ ಕಾರ್ಯಾಗಾರದಲ್ಲಿ ‍ಪಾಲ್ಗೊಂಡಿದ್ದ ರಂಗಕರ್ಮಿ ಪ್ರಸನ್ನ ಆರೋಪಿಸಿದರು.

ADVERTISEMENT

‘ಈ ನಡೆಯ ವಿರುದ್ಧ ಶಿವಪುರ ಸತ್ಯಾ ಗ್ರಹದ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹ ಆರಂಭವಾಗಲಿದೆ’ ಎಂದರು.

‘ಬಾವುಟವನ್ನೇ ನೇಯುತ್ತಿದ್ದ ಉತ್ತರ ಕರ್ನಾಟಕದ ಕೈ ಮಗ್ಗಗಳು, ಧ್ವಜ ಸಂಹಿತೆ ತಿದ್ದುಪಡಿಯಿಂದಾಗಿ ನಷ್ಟಕ್ಕೆ ಸಿಲುಕಲಿವೆ ’ ಎಂದು ಬಳಗದ ಬಾಲಚಂದ್ರ ಹೇಳಿದರು.

‘ಕೃತಕ ನೂಲಿನಿಂದ ತಯಾರಿಸಿದ ಬಾವುಟವನ್ನು ಆಮದು ಮಾಡಿಕೊಳ್ಳುವುದರಿಂದ ರಾಷ್ಟ್ರ ಬಾವು ಟದ ಮೌಲ್ಯವೂ ಕುಗ್ಗಲಿದೆ. ಸಾವಿರಾರು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಗ್ರಾಮ ಸೇವಾ ಸಂಘದ ಸದಸ್ಯ ಸಿ.ಎ. ಅಭಿಲಾಷ್‌ ಪ್ರತಿಕ್ರಿಯಿಸಿದರು.

ಚಿತ್ರ ಕಲಾವಿದ ಕೆ.ಜೆ. ಸಚ್ಚಿದಾನಂದ, ಗಾಂಧಿ ಚಿಂತಕ ಸಂತೋಷ್‌ ಕೌಲಗಿ, ರಜನಿ, ಸೌಮ್ಯಾ ಪಾಲ್ಗೊಂಡಿದ್ದರು.

***

ಧ್ವಜದಿಂದ ಖಾದಿಯನ್ನು ಕಿತ್ತು ಹಾಕುವುದೆಂದರೆ ಬಡ ಮಹಿಳೆಯರು, ಶ್ರಮಿಕರನ್ನು ದೇಶದಿಂದಲೇ ಕಿತ್ತು ಹಾಕಿದಂತೆ. ಧ್ವಜ ಸತ್ಯಾಗ್ರಹವನ್ನು ರಾಜ್ಯದಾದ್ಯಂತ ನಡೆಸಲಾಗುವುದು.

- ಪ್ರಸನ್ನ, ರಂಗಕರ್ಮಿ

ನಮ್ಮದು ರಾಜಕೀಯ ಹೋರಾಟವಲ್ಲ. ಶ್ರಮಿಕರ ಕೌಶಲ ಪರಂಪರೆ ಉಳಿಸುವ ಹೋರಾಟ. ಬಾವುಟ ತಯಾರಿಕೆಯನ್ನು ಬೇರೆ ದೇಶದವರಿಗೆ ನೀಡುವುದು ರಾಷ್ಟ್ರಭಕ್ತಿಯೇ?

- ಕೆ.ಜೆ. ಸಚ್ಚಿದಾನಂದ, ಹೆಸರಾಂತ ಚಿತ್ರ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.