ADVERTISEMENT

‘ಶೀಘ್ರ ನೂತನ ನಾರು ನೀತಿ ರಚನೆ’

ನಾರು ಉತ್ಪನ್ನಗಳ ಮಾರುಕಟ್ಟೆಗೆ ವ್ಯವಸ್ಥಿತ ನೀತಿ ಇಲ್ಲ: ಸಚಿವ ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:16 IST
Last Updated 2 ಜನವರಿ 2019, 20:16 IST
ಖಾದಿ ಉತ್ಸವದಲ್ಲಿ ಸೀರೆ ನೋಡಿದ ಗ್ರಾಹಕರು –ಪ್ರಜಾವಾಣಿ ಚಿತ್ರ
ಖಾದಿ ಉತ್ಸವದಲ್ಲಿ ಸೀರೆ ನೋಡಿದ ಗ್ರಾಹಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ನೂತನವಾಗಿ ನಾರು ನೀತಿ ರೂಪಿಸಲಾಗುವುದು’ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಹೇಳಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ಖಾದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾರು ಉತ್ಪನ್ನಗಳ ಉತ್ಪಾದನೆ, ರಫ್ತು, ಮಾರುಕಟ್ಟೆ ಕುರಿತು ವ್ಯವಸ್ಥಿತವಾದ ನೀತಿ ಇಲ್ಲ. ಹೀಗಾಗಿ ಆ ಉತ್ಪನ್ನಗಳು ಸರಿಯಾಗಿ ಮಾರುಕಟ್ಟೆ ತಲುಪುತ್ತಿಲ್ಲ. ಇಂಥ ನೀತಿ ರೂಪಿಸುವ ಸಲುವಾಗಿ ಜ. 8ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ’ ಎಂದರು.

‘ರಾಜ್ಯದಲ್ಲಿ ಪ್ರತಿ ವರ್ಷ 44 ಲಕ್ಷ ಕೋಟಿ ಟನ್‌ ತೆಂಗಿನ ನಾರಿನ ಹೊಟ್ಟು ಉತ್ಪಾದನೆಯಾಗುತ್ತದೆ. ಆದರೆ, ಬಳಕೆಯಾಗುತ್ತಿರುವುದು ಶೇ 15ರಷ್ಟು ಮಾತ್ರ. ಅದಕ್ಕಾಗಿ ತೆಂಗು ಉತ್ಪಾದಿಸುವ ರಾಜ್ಯದ 14 ಜಿಲ್ಲೆಗಳಲ್ಲಿ 250 ನಾರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ಖಾದಿ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸುವ ಕೆಲಸ ಈ ವರ್ಷದೊಳಗೆ ಮಾಡುವುದಾಗಿ ಹೇಳಿದ ಅವರು, ಖಾದಿ ಉತ್ಸವಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಅದಕ್ಕೆ ಸರಿಯಾದ ಪ್ರಚಾರ ಸಿಗಬೇಕು ಎಂದರು.

ಆಯೋಗ ಸ್ಥಾಪಿಸಿ: ‘ಖಾದಿ ಉತ್ಪನ್ನಗಳ ಮಾರುಕಟ್ಟೆ ವರ್ಧನೆಗೆ ಖಾದಿ ಆಯೋಗ ಸ್ಥಾಪಿಸಬೇಕು. ಮೂರು ನಾಲ್ಕು ಹಳ್ಳಿಗಳನ್ನು ಸೇರಿಸಿ ಒಂದು ಉದ್ಯಮ ಸ್ಥಾಪಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸಲಹೆ ಮಾಡಿದರು.

ಪ್ರದರ್ಶನದಲ್ಲಿ ಏನೇನಿದೆ ?: ಉತ್ಸವದಲ್ಲಿ ಖಾದಿ ಉತ್ಪನ್ನಗಳ 116 ಮಳಿಗೆಗಳು, ಗ್ರಾಮೋದ್ಯೋಗಕ್ಕೆ ಸಂಬಂಧಿಸಿದ 109 ಮಳಿಗೆಗಳು ಇವೆ. ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಗುಡಿ ಕೈಗಾರಿಕೆಯ ಮರದ ಕೆತ್ತನೆಯ ಉತ್ಪನ್ನಗಳು, ಪೀಠೋಪಕರಣ, ಪಾದರಕ್ಷೆ, ಕೈಚೀಲ, ವ್ಯಾನಿಟಿ ಬ್ಯಾಗ್, ಪರ್ಸ್, ಎಲೆಕ್ಟ್ರಾನಿಕ್ ವಸ್ತು, ಜೇನು ತುಪ್ಪ, ಗೋಡಂಬಿ ಹಾಗೂ ಔಷಧಿ ಇವೆ.

*ಮೇಕ್‌ ಇನ್‌ ಇಂಡಿಯಾ ಅಂದರೆ ವಿದೇಶದವರು ತಮ್ಮ ಯಂತ್ರ ಸಂಪನ್ಮೂಲಗಳನ್ನು ಇಲ್ಲಿ ಬಳಸಿ ಉತ್ಪಾದನೆ ಮಾಡುವುದು. ಇದು ಸ್ವದೇಶಿ ಅಲ್ಲ. ಶೋಷಣೆ, ಸುಲಿಗೆಯ ದಾರಿ.
-ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.