ಸುಳ್ವಾಡಿ (ಚಾಮರಾಜನಗರ): ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದ ಆಡಳಿತ ಮಂಡಳಿಯ ಸದಸ್ಯರ ಆಂತರಿಕ ಕಚ್ಚಾಟವೇ ಪೈಶಾಚಿಕ ಕೃತ್ಯಕ್ಕೆ ಕಾರಣವಾಯಿತೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಶನಿವಾರ ಸುಳ್ವಾಡಿ ಗ್ರಾಮದಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ನೆರೆದಿದ್ದ ಜನರು ಇದೇ ವಿಷಯದ ಚರ್ಚೆಯಲ್ಲಿ ತೊಡಗಿದ್ದರು.
ತಮಿಳುನಾಡಿನ ಬರಗೂರು ಮತ್ತು ಸುಳ್ವಾಡಿ ಗ್ರಾಮಸ್ಥರ ನಡುವೆ ದೇವಾಲಯದ ಪೂಜೆ ಮಾಡುವ ವಿಚಾರದಲ್ಲಿ ಹಲವು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆದಿತ್ತು. 10 ವರ್ಷಗಳ ಹಿಂದೆ ಕಿತ್ತಾಟ ನಡೆದಿದ್ದು ಬಿಟ್ಟರೆ, ಆ ನಂತರ ಯಾವುದೇ ಜಗಳ ಆಗಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಆದರೆ, ದೇವಾಲಯದ ಆಡಳಿತ ನಿರ್ವಹಿಸುತ್ತಿದ್ದ ಸೇವಾ ಟ್ರಸ್ಟ್‌ನ ಸದಸ್ಯರ ನಡುವೆ ಆಂತರಿಕ ಕಲಹಗಳಿದ್ದವು. ಈ ವೈಷಮ್ಯವೇ ಪ್ರಸಾದದಲ್ಲಿ ವಿಷ ಬೆರೆಸುವಂತೆ ಮಾಡಿದೆ. ಆಡಳಿತ ಮಂಡಳಿ ಆಂತರಿಕ ಕಚ್ಚಾಟ 12ಮಂದಿಯನ್ನು ಬಲಿ ಪಡೆದಿದೆ ಎಂದು ದೇವಾಲಯದ ಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವರುಹೇಳುತ್ತಾರೆ.
ಉತ್ತಮ ಆದಾಯ:ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಈ ದೇವಾಲಯ ಅಭಿವೃದ್ಧಿ ಹೊಂದಿದ್ದು 30 ವರ್ಷಗಳ ಹಿಂದೆ. ಅದುವರೆಗೂ ಅಲ್ಲಿ ಉದ್ಭವಮೂರ್ತಿಯೊಂದು ಇತ್ತು ಎಂದು ಹೇಳಲಾಗುತ್ತಿದೆ. ಬರಗೂರು ಗ್ರಾಮದವರು ಆ ಸಂದರ್ಭದಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಸ್ಥಳೀಯರಾದ ದುಮ್ಮಾದಪ್ಪ ಅವರು ಪೂಜೆಯ ಜವಾಬ್ದಾರಿ ಹೊತ್ತುಕೊಂಡರು. ಈಗಲೂ ಸುಳ್ವಾಡಿ ಗ್ರಾಮದಲ್ಲೇ ಇರುವ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಬರಗೂರಿನವರೇ ಪೂಜೆ ಮಾಡುತ್ತಿದ್ದಾರೆ.
‘ದುಮ್ಮಾದಪ್ಪ ಅವರ ಮೈಮೇಲೆ ದೇವರು ಬರುತ್ತಿತ್ತು. ಅವರು ಅರ್ಚಕರಾದ ನಂತರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಯಿತು. ದೇವಾಲಯವೂ ಅಭಿವೃದ್ಧಿ ಕಂಡಿತು. ಆದಾಯವೂ ಹೆಚ್ಚಾಯಿತು’ ಎಂದು ಸ್ಥಳೀಯರಾದ ಮುತ್ತು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಇದನ್ನೂ ಓದಿ:ಪ್ರಸಾದದಲ್ಲಿ ‘ರೋಗರ್’ ಕ್ರಿಮಿನಾಶಕ ಬಳಕೆ
‘ಹೆಚ್ಚು ಪ್ರಚಾರಕ್ಕೆ ಬರುತ್ತಿದಂತೆ ಬರಗೂರಿನವರು ಬಂದು ಪೂಜೆಯ ಹಕ್ಕನ್ನು ತಮಗೆ ನೀಡಬೇಕು ಎಂದು ಗಲಾಟೆ ಮಾಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಎರಡೂ ಕಡೆಯವರು ಮಾತನಾಡಿಕೊಂಡು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ನ್ಯಾಯಾಲಯ ಹೇಳಿತ್ತು. ನಂತರ ಸುಳ್ವಾಡಿಯವರೇ ಪೂಜೆ ಮಾಡುತ್ತಿದ್ದರು’ ಎಂದು ಮತ್ತೊಬ್ಬ ಸ್ಥಳೀಯ ಚಿನ್ನತ್ತಂಬಿ ಹಿಂದಿನ ಘಟನೆ ನೆನಪಿಸಿಕೊಂಡರು.
8 ವರ್ಷಗಳ ಹಿಂದೆ ದುಮ್ಮಾದಪ್ಪ ಮೃತಪಟ್ಟ ನಂತರ, ಪೂಜೆ ಮಾಡುವ ವಿಚಾರದಲ್ಲಿ ಮತ್ತೆ ಎರಡೂ ಗ್ರಾಮದವರಿಗೆ ಜಗಳ ಉಂಟಾಯಿತು. ಮಹದೇಶ್ವರ ಬೆಟ್ಟದ ಸಾಲೂರು ಮಠದ ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಬಿಕ್ಕಟ್ಟು ಪರಿಹರಿಸುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ದೇವಾಲಯದ ಆಡಳಿತ ನಿರ್ವಹಿಸಲು ಟ್ರಸ್ಟ್ ರಚಿಸಲು ತೀರ್ಮಾನಿಸಲಾಯಿತು.
ಸ್ಥಳೀಯರು ಒಬ್ಬರೇ: ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಸೇವಾ ಟ್ರಸ್ಟ್‌ನಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಒಂಬತ್ತು ಮಂದಿ ಸದಸ್ಯರಿದ್ದಾರೆ. ಮಹದೇಶ್ವರಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಅವರು ಟ್ರಸ್ಟ್ ಅಧ್ಯಕ್ಷರು. ಹೊಂಡರಬಾಳುವಿನ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಖಜಾಂಚಿ ಆಗಿದ್ದಾರೆ. ಪಿ.ಗುರುಮಲ್ಲಪ್ಪ ಉಪಾಧ್ಯಕ್ಷ, ಎಸ್.ಶಶಿಬಿಂಬ ಕಾರ್ಯದರ್ಶಿ. ಚಿನ್ನಪ್ಪಿ, ಪಿ.ಶಿವಣ್ಣ, ವಿ.ಮಾದಯ್ಯ, ಎಚ್.ಲೋಕೇಶ್, ಎನ್.ಕೇಶವಮೂರ್ತಿ ಟ್ರಸ್ಟಿಗಳಿದ್ದಾರೆ. ಶುಕ್ರವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಪ್ಪಿ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆಡಳಿತ ಮಂಡಳಿ ಸದಸ್ಯರಲ್ಲಿ ಸುಳ್ವಾಡಿ ಗ್ರಾಮದವರುಇವರೊಬ್ಬರೇ. ಉಳಿದವರು ಅಕ್ಕ ಪಕ್ಕದ ಊರಿನವರು. ಬಂಧಿತ ಮತ್ತೊಬ್ಬ ವ್ಯಕ್ತಿ ಮಾದೇಶ ಅವರು ದೇವಾಲಯದಲ್ಲಿ ವ್ಯವಸ್ಥಾಪಕರಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದವು. ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಸಮ್ಮತಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಕೆಲವು ವೈಯಕ್ತಿಕ ಕಾರಣಗಳೂ ಇವೆ. ಈ ‘ವೈಯಕ್ತಿಕ’ ವಿಚಾರಗಳೂ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದರು. ಹಾಗಾಗಿ ಆದಾಯವೂ ಹೆಚ್ಚು ಬರುತ್ತಿತ್ತು. ಆದಾಯ ಹಂಚಿಕೆ, ಬಳಕೆಯ ವಿಚಾರದಲ್ಲಿ ಸದಸ್ಯರ ನಡುವೆ ಜಗಳ ಆಗಿದ್ದೂ ಇದೆ ಎಂದು ಮೂಲಗಳು ತಿಳಿಸಿವೆ.
ಗೋಪುರ ವಿವಾದ: ದೇವಾಲಯಕ್ಕೆ ರಾಜ ಗೋಪುರ ನಿರ್ಮಾಣ ಮಾಡಬೇಕು ಎಂಬುದು ಚಿನ್ನಪ್ಪಿ ಹಾಗೂ ಇನ್ನು ಕೆಲವು ಸದಸ್ಯರ ನಿಲುವಾಗಿತ್ತು. ಇದಕ್ಕೆ ₹1.5 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ಸಭೆಯೂ ನಡೆದಿತ್ತು. ಅಲ್ಲಿ ಸದಸ್ಯರ ನಡುವೆ ವಾಗ್ವಾದ ಆಗಿತ್ತು ಎಂದು ಗೊತ್ತಾಗಿದೆ. ಹಾಗಿದ್ದರೂ ಶುಕ್ರವಾರಗುದ್ದಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿಗುದ್ದಲಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮಾತ್ರ ಪ್ರಸಾದ ವ್ಯವಸ್ಥೆ ಏರ್ಪಡಿಲಾಗಿತ್ತು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಓಂ ಶಕ್ತಿ ವ್ರತಧಾರಿಗಳಿಗೆ ಅದೇ ಪ್ರಸಾದವನ್ನು ನೀಡಲಾಯಿತು. ಇದರಿಂದ ಸಾವು ನೋವು ಇನ್ನೂ ಹೆಚ್ಚಾದವು ಎಂದು ಹೇಳಲಾಗುತ್ತಿದೆ. ಕೆಲವು 15 ಕೆಜಿಯಷ್ಟು ಅಕ್ಕಯಿಂದ ಪ್ರಸಾದ ಸಿದ್ಧಪಡಿಸಲಾಗಿತ್ತು ಎಂದು ಹೇಳಿದರೆ, ಇನ್ನು ಕೆಲವರು ಐದು ಕೆಜಿ ಎಂದು ಹೇಳುತ್ತಿದ್ದಾರೆ.
‘ಆಡಳಿತ ಮಂಡಳಿಯಲ್ಲಿ ಲಿಂಗಾಯತ ಸಮುದಾಯದವರೇ ಇದ್ದಾರೆ. ಅರ್ಚಕರು, ಅಡುಗೆ ಮಾಡುವವರು ಅದೇ ಸಮುದಾಯದವರು. ಅವರನ್ನು ಬಿಟ್ಟು ಬೇರೆಯಾರಿಗೂ ಅಡುಗೆ ಕೋಣೆಗೆ ಪ್ರವೇಶವಿಲ್ಲ. ಈ ಗುಂಪಿನಲ್ಲೇ ಒಬ್ಬರು ಪ್ರಸಾದಕ್ಕೆ ವಿಷ ಬೆರೆಸಿರಬಹುದು’ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಾರೆ.
ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯ ಚಿಕ್ಕಅಂಕನಹಳ್ಳಿಯ ಪ್ರಕಾಶ್ (48) ಅವರ ಶವ ಹನೂರು ಬಸ್ ನಿಲ್ದಾಣದಲ್ಲಿ ಶನಿವಾರ ಪತ್ತೆಯಾಗಿದೆ.
'ಅವರು ಆಗಾಗ ಸುಳ್ವಾಡಿ ದೇವಸ್ಥಾನಕ್ಕೆ ಬರುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಶುಕ್ರವಾರವೂ ಭೇಟಿ ನೀಡಿ ಪ್ರಸಾದ ಸೇವಿಸಿದ್ದಾರೆ' ಎಂದು ಹನೂರು ಶಾಸಕ ಆರ್. ನರೇಂದ್ರ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಆದಾಯದ ಮೇಲೆ ಕಣ್ಣು
ದೇವಾಲಯಕ್ಕೆ ಮೈಸೂರು, ಬೆಂಗಳೂರು, ಪಕ್ಕದ ತಮಿಳುನಾಡುಗಳಿಂದಲೂ ಭಕ್ತರು ಬರುತ್ತಾರೆ. ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಹೆಚ್ಚಿನ ಭಕ್ತರು ಸೇರುತ್ತಾರೆ.
ಮಾರಮ್ಮನಿಗೆ ಆಡುಗಳನ್ನು ಬಲಿ ಕೊಟ್ಟು, ನಂತರ ದೇವಾಲಯದ ಹೊರ ಆವರಣದಲ್ಲಿ ಮಾಂಸಾಹಾರ ಸಿದ್ಧಪಡಿಸಿ ಪ್ರಸಾದ ಸ್ವೀಕರಿಸುವುದು ನಡೆದುಕೊಂಡು ಬಂದಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆಯೂ ಇದೆ. ಕೆಲವು ವರ್ಷಗಳಿಂದ ದೇವಾಲಯಕ್ಕೆ ಉತ್ತಮ ಆದಾಯವೂ ಬರುತ್ತಿದೆ. ಈ ಆದಾಯದ ಮೇಲೆ ಟ್ರಸ್ಟ್‌ನ ಕೆಲವರು ಕಣ್ಣಿಟ್ಟಿದ್ದರು ಎನ್ನಲಾಗಿದೆ.
ಸ್ವಾಮೀಜಿ ಏಕೆ ಬರಲಿಲ್ಲ?
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸಾಲೂರು ಮಠದ ಕಿರಿಯ ಶ್ರೀಗಳಾದ ಪಟ್ಟದ ಇಮ್ಮಡಿ ಮಹಾದೇವಸ್ವಾಮಿ ಬಂದಿರಲಿಲ್ಲ. ಆದರೆ, ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಹಿರಿಯ ಸ್ವಾಮೀಜಿಗಳಾದ ಗುರುಸ್ವಾಮಿ ಅವರು ಬಂದಿದ್ದರು. ಪ್ರಸಾದ ಸೇವಿಸಿರಲಿಲ್ಲ.
ದೇವಾಲಯದಲ್ಲಿ ನಡೆಯುವ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಬರುತ್ತಿದ್ದ ಮಹಾದೇವಸ್ವಾಮಿ ಶುಕ್ರವಾರ ಯಾಕೆ ಬಂದಿರಲಿಲ್ಲ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿಗೆ ಮೂರು ದಿನ ಬೇಕು
‘ಭಕ್ತರಿಗೆ ವಿತರಿಸಲಾಗಿದ್ದ ಪ್ರಸಾದದ ಮಾದರಿ, ಅಡುಗೆಗೆ ಬಳಸಿದ್ದ ನೀರಿನ ಮಾದರಿ1ರಿನ ಸಿಎಫ್‌ಟಿಆರ್‌ಐಗೆ ಕಳುಹಿಸಲಾಗಿದೆ. ವರದಿ ಬರಲು ಮೂರು ದಿನ ಬೇಕು. ಮೃತಪಟ್ಟವರ ಅಂಗಾಂಗಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಕೆ.ಪ್ರಸಾದ್ ತಿಳಿಸಿದರು.
ಪೂರ್ವಯೋಜಿತ ಕೃತ್ಯ
ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರ ತನಿಖೆ ಸಹ ಇದೇ ಜಾಡಿನಲ್ಲಿ ಸಾಗಿದೆ.
‘ಬೆಳೆಗಳಿಗೆ ಬಳಸುವ ಅತ್ಯಂತ ವಿಷಕಾರಿ ರಾಸಾಯನಿಕವನ್ನೇ ಬಳಸಿರುವ ಸಾಧ್ಯತೆ ಇದೆ. ಈ ಪ್ರಮಾಣದಲ್ಲಿ ಪರಿಣಾಮ ಬೀರಬೇಕಾದರೆ ಕನಿಷ್ಠ 2ರಿಂದ 3 ಲೀಟರ್‌ನಷ್ಟು ಬೆರೆಸಿರಬೇಕು’ ಎಂದು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ಪೈಶಾಚಿಕ ಕೃತ್ಯ ಎಸಗಿದವರಿಗೆ ಅದರ ಮುಂದಾಗುವ ಪರಿಣಾಮಗಳ ಅರಿವು ಇರಲಿಲ್ಲ ಎನಿಸುತ್ತಿದೆ. ಪ್ರಸಾದ ಸೇವಿಸಿದವರು ವಾಂತಿ, ಭೇದಿ ಮಾಡಿಕೊಂಡರೆ ಕಾರ್ಯಕ್ರಮ ಆಯೋಜಕರಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಆಲೋಚನೆ ಇದ್ದಿರಬಹುದು. ಆದರೆ ದೊಡ್ಡ ದುರಂತ ನಡೆದುಹೋಗಿದೆ’ ಎನ್ನುತ್ತಾರೆ.
* ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಈ ವಿಷಯ ಜನರಿಗೇನು ಗೊತ್ತು? ಘಟನೆಗೂ ನನಗೂ ಸಂಬಂಧ ಇಲ್ಲ
-ಪಟ್ಟದ ಇಮ್ಮಡಿ ಮಹಾದೇವಸ್ವಾಮಿ, ಟ್ರಸ್ಟ್ ಅಧ್ಯಕ್ಷ
* ಘಟನೆ ಯಾಕೆ ಆಯಿತು ಹೇಗೆ ಆಯಿತು ಎಂಬುದರ ಮಾಹಿತಿ ಇಲ್ಲ. ಸುಳ್ವಾಡಿ ದೇವಾಲಯದ ಹಣ, ವಸ್ತುಗಳು ಸಾಲೂರು ಮಠಕ್ಕೆ ಬರುತ್ತಿರಲಿಲ್ಲ
- ಗುರುಸ್ವಾಮಿ, ಸಾಲೂರು ಮಠದ ಪೀಠಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.