ಮೈಸೂರು/ಹುಣಸೂರು: ಹೊಳೆನರಸೀಪುರದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ ಕೆ.ಆರ್. ನಗರದ ಮಹಿಳೆಯ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದ್ದು, ಆಕೆಯನ್ನು, ರೇವಣ್ಣ ಆಪ್ತ ರಾಜಗೋಪಾಲ್ ಅವರ ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿಯ ತೋಟದ ಮನೆಯಲ್ಲಿ ಶನಿವಾರ ಎಸ್‌ಐಟಿ ತಂಡ ಪತ್ತೆ ಮಾಡಿದೆ.
‘ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯನ್ನು ಏ. 29 ರಂದು ರೇವಣ್ಣ ಅವರ ಸೂಚನೆಯಂತೆ ಸತೀಶ್ ಬಾಬಣ್ಣ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಆಕೆಯ ಜೀವಕ್ಕೆ ಅಪಾಯವಿದೆ’ ಎಂದು ಮಹಿಳೆಯ ಮಗ ಕೆ.ಆರ್. ನಗರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಎಸ್‌ಐಟಿ ತಂಡವು ಮಹಿಳೆಯನ್ನು ಶನಿವಾರ ಬೆಳಿಗ್ಗೆ 11.30ಕ್ಕೆ ರಕ್ಷಿಸಿದರು ಎನ್ನಲಾಗಿದೆ.
‘ಹುಣಸೂರು ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾಳೇನಹಳ್ಳಿಯಲ್ಲಿ ತೋಟದ ಮನೆಯಿದ್ದು, ಇಲ್ಲಿ ಒಂದು ವಾರದಿಂದ ಮಹಿಳೆಯನ್ನು ಇರಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಯಾರೀತ ರಾಜ್‌ಗೋಪಾಲ್?: ರಾಜಗೋಪಾಲ್ ಅವರು ಹುಣಸೂರು ತಾಲ್ಲೂಕಿನ ಹೊಸೂರು ಕೊಡಗು ಕಾಲೊನಿ ಗ್ರಾಮದ ನಿವಾಸಿ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕ ಆಗಿದ್ದರು. ಸದ್ಯ ರೇವಣ್ಣ ಅವರಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ನಿರ್ವಹಿಸುತ್ತಿದ್ದಾರೆ. ಏಳು ವರ್ಷದ ಹಿಂದೆ ತೋಟದ ಮನೆ ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.